ಕೇರಳ ಸರಕಾರದ 'ಬೀಫ್' ಟ್ವೀಟ್ ರಿಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ಸಿ.ಟಿ.ರವಿ!

Update: 2020-01-16 17:30 GMT

ಬೆಂಗಳೂರು: ಕೇರಳದ ಪ್ರವಾಸೋದ್ಯಮದ ಟ್ವಿಟರ್ ಹ್ಯಾಂಡಲ್ ಇಂದು ಟ್ವೀಟ್ ಒಂದನ್ನು ಮಾಡಿದ್ದು, ಆ ಟ್ವೀಟನ್ನು ರಿಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕ ಸಿ.ಟಿ. ರವಿ ಪೇಚಿಗೆ ಸಿಲುಕಿದ್ದಾರೆ.

ಇಂದು @KeralaTourism ರಾಜ್ಯದ ಜನಪ್ರಿಯ ಬೀಫ್ ಫ್ರೈ ಖಾದ್ಯದ ಒಂದು ಫೋಟೋ ಪೋಸ್ಟ್ ಮಾಡಿ ಅದರ ರೆಸಿಪಿ ಲಿಂಕ್ ಕೂಡ ನೀಡಿತ್ತು.

"ಪರಿಮಳಯುಕ್ತ ಸಾಂಬಾರ ಪದಾರ್ಥಗಳು, ತೆಂಗಿನಕಾಯಿ ತುಂಡುಗಳು ಹಾಗೂ ಕರಿಬೇವಿನ ಸೊಪ್ಪಿನ ಜತೆ ಸಣ್ಣ ಉರಿಯಲ್ಲಿ ರೋಸ್ಟ್ ಮಾಡಲ್ಪಟ್ಟ ಬೀಫ್‍ ನ ಸಣ್ಣ  ಮೆದುವಾದ ತುಂಡುಗಳು. ಬೀಫ್ ಉಲತಿಯತ್, ಅತ್ಯಂತ ಕ್ಲಾಸಿಕ್ ಖಾದ್ಯದ ರೆಸಿಪಿ''  ಎಂದು ಕೇರಳಟೂರಿಸಂ ಟ್ವೀಟ್‍ ನಲ್ಲಿ ಬರೆಯಲಾಗಿತ್ತು ಹಾಗೂ ಕೊನೆಗೆ ಆ ರೆಸಿಪಿಯಿರುವ ವೆಬ್‍ ಸೈಟ್ ಲಿಂಕ್ ನೀಡಲಾಗಿತ್ತು.

ಈ ಟ್ವೀಟನ್ನು ಸಿ.ಟಿ. ರವಿಯವರು ರಿಟ್ವೀಟ್ ಮಾಡಿ, 'ಕರ್ನಾಟಕಕ್ಕೆ ಸುಸ್ವಾಗತ' ಎಂದು ಬರೆದಿದ್ದರು.

ಈ ಟ್ವೀಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಟ್ವಿಟರಿಗರು, "ನಮ್ ಹಿಂದೂ ಧರ್ಮ ಗೋ ಮಾತೆ ಬಗ್ಗೆ ಪುಂಕಾನು ಪುಂಕ ಪುಂಗಿ ಈರೀತಿ ಟ್ವೀಟ್ ಮಾಡಿದಿರಲ್ಲ ಸ್ವಾಮಿ. ಅಮಾಯಕರನ್ನು ಧರ್ಮದ ಬಗ್ಗೆ ತಲೆಗೆ ತುಂಬಿ ನೀವು ಈತರ ಮಾಡೊದು ಸರಿಯೇ...", " ಸಂಘಿಗಳು  ಅತೀ ಪ್ರಾಣಿಪ್ರಿಯರು... ಪಾಪ ಮಾಂಸವೆಂದರೆ ದೂರ ನಿಲ್ಲುವ ಮನೋಜೀವಿಗಳು, ಇಂಥ ಅಜ್ಞಾನಿ ಕೋಮುಗಳ ಕೈಲಿ ನಮ್ ದೇಶದ ಧಿಕ್ಕುಗಳು ಬದಲಾದವು", "ದೊಡ್ಡದಾಗಿ ಬಿಲ್ಡಪ್ ಕೊಡೋ ಬಿಜೆಪಿ ಲಜ್ಜೆಗೆಟ್ಟವರು 'ಗೋ ಹತ್ಯೆ ನಿಷೇಧ' ಮಾಡ್ಬೇಕು ಅನ್ನೋ ಕಳ್ಳರ ಪಾರ್ಟಿಯೊಂದು ಗೋಮಾಂಸದ ವಿಷಯ ಪ್ರಸ್ತಾಪಿಸಿರುವುದು ವಿಷಾಧಕರ. ಧರ್ಮ, ಜಾತಿ, ದೇವರು, ದೇಶ ಅಂತ ವಿಷಬೀಜ ಬಿತ್ತಿ ದೇಶ ಒಡೆದು ನಾಚಿಕೆಯಿಲ್ಲದೆ ಸಂಘದ ಪರವಾಗಿ ನೀವು ಮಾಡೋ ಕೆಟ್ಟ ಕೆಲಸಗಳು ಜನರಿಗೆ ಈಗಲಾದರೂ ಅರಿವಾಗಲಿ", "ಏನ್ಸಾರ್​ ಇದು, ಬೀಪ್​ ವೆಲ್​ಕಮ್​ ಮಾಡ್ತೀದಿರಾ..? ಅವ್ರೇನೋ ಸೆಕ್ಯೂಲರ್​ ಹೆಸರಲ್ಲಿ, ಸಂಸ್ಕ್ರತಿಯನ್ನೆಲ್ಲಾ ಬಿಟ್ಟಾಕಿ ಮಾಡಬಾರದ್ದನ್ನೆಲ್ಲಾ ಮಾಡ್ತೀದಾರೆ. ನೀವು ಅದನ್ನ ವೆಲ್​ಕಮ್​ ಅಂತೀದಿರಾ...! ನಾವು ಇದನ್ನ ಬಿಜೆಪಿ ನಾಯಕರಿಂದ ನಿರೀಕ್ಷಿಸಿರಲಿಲ್ಲ", "ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತು ಅನ್ನೋ ಗಾದೆ ನಿಮಗೆ ಸರಿಯಾಗಿ ಅನ್ವಯಿಸುತ್ತೆ, ನೀವು ಯಾವುದನ್ನ ಸ್ವಾಗತಿಸುತ್ತಿದ್ದೀರಿ ಗೋಮಾಂಸ ಭಕ್ಷನೆಯನ್ನೋ !? ಕೇರಳ ಪ್ರವಾಸೋದ್ಯಮವನ್ನೋ!?" ಎಂದು ಸಿಟಿ ರವಿ ವಿರುದ್ಧ ಹರಿಹಾಯ್ದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ  ಆಕ್ರೋಶ ಹೆಚ್ಚುತ್ತಿರುವಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿದ ಸಿಟಿ ರವಿಯವರು, "ಗೆಳೆಯರೆ ನಾನು ಬೀಫನ್ನು ಬೆಂಬಲಿಸುತ್ತೇನೆ ಎಂದು ನೀವು ಆಲೋಚನೆ ಮಾಡಲು ಹೇಗೆ ಸಾಧ್ಯ. ಅದು ನನ್ನ ನಂಬಿಕೆಗೆ ವಿರುದ್ಧವಾದುದು. ನಿಮ್ಮಲ್ಲಿ ಹಲವರಿಗೆ ಕೇರಳ ಪ್ರವಾಸೋದ್ಯಮದ ಟ್ವೀಟ್ ನಿಂದ ನೋವಾಗಿದೆ ಎಂದು ನನಗೆ ತಿಳಿದಿದೆ. ನನ್ನ ಟ್ವೀಟ್ ವ್ಯಂಗ್ಯದಿಂದ ಕೂಡಿತ್ತು ಮತ್ತು ಅದರ ವಿರುದ್ಧ ಮೌನ ಪ್ರತಿಭಟನೆಯಾಗಿತ್ತು" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News