ಗಡಿಯಾರ ಉದ್ಯಮಕ್ಕೆ ಉತ್ತೇಜನ ನೀಡಲು ಸರಕಾರ ಬದ್ಧ: ಅಶ್ವತ್ಥ ನಾರಾಯಣ

Update: 2020-01-16 17:36 GMT

ಬೆಂಗಳೂರು, ಜ.16: ಗಡಿಯಾರ ಉದ್ಯಮ ಸಾಕಷ್ಟು ಬೆಳದಿದ್ದು, ಮತ್ತಷ್ಟು ಉತ್ತೇಜನ ನೀಡಲು ರಾಜ್ಯ ಸರಕಾರ ಬದ್ಧ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಗುರುವಾರ ಅರಮನೆ ಮೈದಾನದಲ್ಲಿ ಸಮಯ ಭಾರತಿ ವತಿಯಿಂದ ಆಯೋಜಿಸಿದ್ದ ಬೃಹತ್ ಕೈಗಡಿಯಾರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ವಾರ್ಷಿಕ ಹತ್ತು ಸಾವಿರಕ್ಕೂ ಅಧಿಕ ಕೋಟಿ ರೂ. ವಹಿವಾಟು ಗಡಿಯಾರ ಉದ್ಯಮದಲ್ಲಿ ಆಗುತ್ತಿದ್ದು, ಟೈಟಾನ್, ಟೈಮೆಕ್ಸ್, ನಾಟಿಕಾ, ರೊಲೆಕ್ಸ್, ಪ್ಯಾರೀಸ್, ಟಾಮಿ ಹಿಲ್ಫಿಗರ್, ಟಿಸ್ಸಾಟ್ ಹಾಗೂ ಲಾಂಗಿನೆಸ್ ಸೇರಿದಂತೆ ಹಲವು ಗಡಿಯಾರಗಳಿಗೆ ಭಾರತವೇ ಪ್ರಮುಖ ಮಾರುಕಟ್ಟೆ ಎಂದು ಹೇಳಿದರು.

ಗಡಿ ಎಂದರೆ ಕೇವಲ ಸಮಯ ಅಲ್ಲ. ಈಗ ಇದರಲ್ಲಿ ತಂತ್ರಜ್ಞಾನ ಬೆಳೆದಿದೆ. ಹಲವು ವ್ಯವಸ್ಥೆ, ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಸ್ಮಾರ್ಟ್‌ಫೋನ್ ಕಾಲದಲ್ಲಿ ಗಡಿಯಾರ- ಕೈಗಡಿಯಾರ ಯುಗ ಮುಗಿದಿದೆ ಎನ್ನುವ ಭಾವನೆ ಜನ ಸಾಮಾನ್ಯರಲ್ಲಿ ದಟ್ಟವಾಗುತ್ತಿದೆ. ಆದರೆ, ಇಂದಿಗೂ ಕೂಡಾ ಕೈ ಗಡಿಯಾರ ಪ್ರಿಯರ, ಬಳಕೆದಾರರ ಬಹು ಸಂಖ್ಯೆಯೇ ಇದೆ ಎಂದರು.

ಕೈಗಡಿಯಾರ ಮೇಳದಲ್ಲಿ ಅಮೆರಿಕಾ, ಚೀನಾ, ಜರ್ಮನಿ ಸೇರಿದಂತೆ ಹಲವು ದೇಶಗಳ ಸರಿ ಸುಮಾರು 50 ಸಾವಿರಕ್ಕೂ ಹೆಚ್ಚು ವಿನ್ಯಾಸವುಳ್ಳ ವಾಚ್‌ಗಳು ಇದ್ದವು. ಪ್ರದರ್ಶನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ ನೀಡಿದರು. ಸಮಯ ಭಾರತಿ ಸಂಘಟನಾ ಸಮಿತಿ ಅಧ್ಯಕ್ಷ ಹೇಮಲ್ ಮಿಹಿರ್ ಖರೋಡ್, ವಾಚ್ ಟ್ರೇಡ್ ಫೆಡರೇಶನ್‌ನ ಅಧ್ಯಕ್ಷ ವಿನೋದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News