ವಿಶ್ವ ಕೌಶಲ ಸ್ಪರ್ಧೆಗೆ ಯುವಕರ ಹುಡುಕಾಟಕ್ಕೆ ಸಿದ್ಧತೆ

Update: 2020-01-16 17:41 GMT

ಬೆಂಗಳೂರು, ಜ.16: ಚೀನಾದ ಶಾಂಘೈನಲ್ಲಿ ನಡೆಯಲಿರುವ ಅಂತರ್‌ರಾಷ್ಟ್ರೀಯ ಮಟ್ಟದ ವಿಶ್ವ ಕೌಶಲ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಬೇಕಾದ ಯುವಕರ ಹುಡುಕಾಟಕ್ಕೆ ಸರಕಾರ ಮುಂದಾಗಿದೆ.

ವಿಶ್ವ ಕೌಶಲ ಸ್ಪರ್ಧೆಯಲ್ಲಿ 15 ರಿಂದ 22 ವಯೋಮಾನದವರು ಪಾಲ್ಗೊಳ್ಳಲಿದ್ದಾರೆ. ಚೈನಾದಲ್ಲಿ ನಮ್ಮ ಯುವಕರು ಸ್ಪರ್ಧೆಯೊಡ್ಡಬೇಕು ಎಂಬ ನಿಟ್ಟಿನಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಜ್ಯ ಮಟ್ಟದಲ್ಲಿ ಪ್ರತಿಭೆ ಹುಡುಕಲು ಪ್ರತಿಭಾ ಪ್ರದರ್ಶನಕ್ಕೆ ಇಂಡಿಯಾ ಸ್ಕಿಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ. ಇಲ್ಲಿ ಆಯ್ಕೆಯಾದವರನ್ನು ರಾಷ್ಟ್ರೀಯ ಮಟ್ಟದ ಸ್ಕಿಲ್ ಇಂಡಿಯಾ 2020 ಕೌಶಲ ಸ್ಪರ್ಧೆಗೆ ಕಳಿಸಲಾಗುತ್ತದೆ. ಅಲ್ಲಿ ವಿಜೇತರಾದವರು ಶಾಂಘೈನಲ್ಲಿ ಸ್ಪರ್ಧಿಸಲು ಅವಕಾಶ ಪಡೆಯುತ್ತಾರೆ.

ಮೆಕಾಟ್ರಾನಿಕ್ಸ್, ಮ್ಯಾನುಫ್ಯಾಕ್ಚರಿಂಗ್ ಟೀಂ ಚಾಲೆಂಜ್, ಏರೋನಾಟಿಕಲ್ ಎಂಜಿನಿಯರಿಂಗ್, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿ, ವಾಟರ್ ಟೆಕ್ನಾಲಜಿ, ಐಟಿ ನೆಟ್‌ವರ್ಕ್ ಕೇಬಲಿಂಗ್, ಮೊಬೈಲ್ ರೋಬೋಟಿಕ್ಸ್, ಲ್ಯಾಂಡ್‌ಸ್ಕೇಪ್ ಕಾಂಕ್ರೀಟ್ ಕನ್‌ಸ್ಟ್ರಕ್ಷನ್ ವರ್ಕ್ ಸೇರಿ 38 ಕ್ಷೇತ್ರಗಳಲ್ಲಿನ ಕೌಶಲ್ಯ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.

ಕಾಲೇಜು ಶಿಕ್ಷಣ ಇಲಾಖೆ ಮೂಲಕ ಎಲ್ಲ ಕಾಲೇಜುಗಳಿಗೆ ಈಗಾಗಲೇ ಸಂದೇಶ ಕಳುಹಿಸಲಾಗಿದೆ. ಪ್ರವೇಶ, ನೋಂದಣಿ, ಅವಕಾಶಗಳ ಕುರಿತು http://www.kaushalkar.com/world-skills/world-skills-karnataka-2020 ವೆಬ್‌ನಲ್ಲಿಯೂ ಮಾಹಿತಿ ಪಡೆಯಲು ಅವಕಾಶವಿದೆ. ಐಟಿ ಹಾಗೂ ಸ್ಟಾರ್ಟ್‌ಅಪ್ ಕಾರಣಕ್ಕೆ ವಿಶ್ವವೇ ಬೆಂಗಳೂರಿನ ಕಡೆಗೆ ನೋಡುತ್ತಿದೆ.

ಇಲ್ಲಿನ ಮಕ್ಕಳಲ್ಲಿರುವ ಅಪರೂಪದ ಕೌಶಲ ಜ್ಞಾನ ಇಡೀ ವಿಶ್ವಕ್ಕೆ ತಿಳಿಯಬೇಕಿದೆ. ಅವರಿಗೂ ಒಂದು ಜಾಗತಿಕ ಮಟ್ಟದ ವೇದಿಕೆ ಸಿಗಬೇಕೆಂಬ ಕಾರಣಕ್ಕೆ ಕೌಶಲಾಭಿವೃದ್ಧಿ ಇಲಾಖೆ ವಿಶೇಷ ಪ್ರಯತ್ನ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News