ಮುಖ್ಯಮಂತ್ರಿಯಿಂದ ಕೆಎಂಎಫ್ ಉತ್ಪನ್ನಗಳ ಬಿಡುಗಡೆ

Update: 2020-01-16 17:49 GMT

ಬೆಂಗಳೂರು, ಜ.16: ಕೆಎಂಎಫ್ ನಂದಿನಿ ಬ್ರಾಂಡ್‌ನ ದೇಶಿ ಹಾಲು ಸೇರಿ ಇತರೆ ಉತ್ಪನ್ನಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಬಿಡುಗಡೆ ಮಾಡಿದರು.

ನಗರದ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಕೆಎಂಎಫ್‌ನ ನಂದಿನಿ ಬ್ರಾಂಡ್‌ನ ದೇಶಿ ಹಾಲು, ಚೀಸ್, ಐಸ್‌ಕ್ರೀಂ ಉತ್ಪನ್ನಗಳನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು.

ಈ ಸಂಬಂಧ ಮಾಹಿತಿ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮೊದಲ ಬಾರಿಗೆ ದೇಶಿ ಹಾಲನ್ನು ಬಿಡುಗಡೆ ಮಾಡಲಾಗಿದೆ. ರೈತರ ಕೈಗಾರಿಕೆ ಯಾಗಿರುವ ಕೆಎಂಎಫ್ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಿಎಂ ಸಹಿತ ರಾಜ್ಯ ಸರಕಾರ ಸಹಕಾರ ನೀಡಬೇಕಿದೆ. ಎಲ್ಲ 14 ಒಕ್ಕೂಟಗಳು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಬೆಳಸಬಹುದು. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕಾದ ಅಗತ್ಯ ಇದೆ ಎಂದೂ ಜಾರಕಿಹೊಳಿ ತಿಳಿಸಿದರು.

2008ರಲ್ಲಿ ಮೊದಲ ಬಾರಿಗೆ ಹೈನುಗಾರರಿಗೆ ಪ್ರತಿ ಲೀ. ಹಾಲಿಗೆ ಎರಡು ರೂ. ಪ್ರೋತ್ಸಾಹ ಯಡಿಯೂರಪ್ಪಪ್ರಕಟಿಸಿದ್ದರು. ಇದು ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ನಂತರ ಬಂದಂತಹ ಸರಕಾರಗಳು ಇದಕ್ಕೆ ಬೆಂಬಲಿಸಿದ್ದು, ಹಾಲಿ ಲೀ.ಗೆ 5 ರೂ. ಇರುವ ಪ್ರೋತ್ಸಾಹ ಧನವನ್ನು 6 ರೂ.ಗೆ ಹೆಚ್ಚಿಸಬೇಕು ಎಂದು ಸಿಎಂ ಬಳಿ ಕೆಎಂಎಫ್ ಅಧ್ಯಕ್ಷ ಾಲಚಂದ್ರ ಜಾರಕಿಹೊಳಿ ವಿನಂತಿಸಿದರು.

ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಹೈನೋದ್ಯಮದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನವನ್ನು ಹೊಂದಿದೆ. ಪ್ರತಿನಿತ್ಯ ಕೆಎಂಎಫ್‌ನಿಂದ ಗರಿಷ್ಠ 84.43 ಲಕ್ಷ ಲೀ. ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಇದು ಶೇ.80ರಷ್ಟು ಸಣ್ಣ ಹಾಗೂ ಅತಿಸಣ್ಣ ರೈತರಿಗೆ ವರದಾನವಾಗಿದೆ. ಈ ದಿನ ದೇಶಿ ಹಾಲು ಹಾಗೂ ಇತರ ಉತ್ಪನ್ನಗಳನ್ನು ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ ಎಂದರು.

ಸಮಾರಂಭದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಪ್ರಭು ಚವ್ಹಾಣ್, ಕೆಎಂಎಫ್ ಎಂಡಿ ಸತೀಶ್, ಸರಕಾರದ ಕಾರ್ಯದರ್ಶಿ ರಶ್ಮಿ ಮಹೇಶ್, ಕೆಎಂಎಫ್ ಆಡಳಿತ ಮಂಡಳಿಯ ನಿರ್ದೇಶಕರು ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News