ಬಂಧಿತರು ನಮ್ಮ ಕಾರ್ಯಕರ್ತರಲ್ಲ, ಆಯುಕ್ತರ ವಿರುದ್ಧ ಮಾನನಷ್ಟ ಮೊಕದ್ದಮೆ: ಎಸ್‌ಡಿಪಿಐ ರಾಜ್ಯಾಧ್ಯಕ್ಷ

Update: 2020-01-17 13:03 GMT

ಬೆಂಗಳೂರು, ಜ.17: ಆರೆಸ್ಸೆಸ್ ಕಾರ್ಯಕರ್ತ ವರುಣ್ ಮೇಲಿನ ಮಾರಣಾಂತಿಕ ಹಲ್ಲೆ ಆರೋಪ ಸಂಬಂಧ ಬಂಧಿತ ಆರೋಪಿಗಳು ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರಲ್ಲ. ಈ ಬಗ್ಗೆ ತನಿಖೆ ನಡೆಸದೆ, ಸುಳ್ಳಿನ ಕತೆ ಕಟ್ಟಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದರು.

ಶುಕ್ರವಾರ ನಗರದ ಎಸ್‌ಡಿಪಿಐ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಧಿತ ಆರು ಮಂದಿ ಅನ್ನು ಇದುವರೆಗೂ ನೋಡಿಲ್ಲ. ಅವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಪೊಲೀಸರು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಜನಪರ ಪಕ್ಷಕ್ಕೆ ಹಾನಿ ಉಂಟು ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ಮುಸ್ಲಿಮ್, ದಲಿತ, ಶೋಷಿತರ ಪರವಾಗಿ ಹೋರಾಟ ನಡೆಸುತ್ತಿರುವ ಜನಪರ ಪಕ್ಷ ಎಸ್‌ಡಿಪಿಐ ಆಗಿದೆ. ಸಂವಿಧಾನ ಬದ್ಧವಾಗಿ, ಸಂವಿಧಾನ ಗೌರವಿಸುವ ಪಕ್ಷವೂ ಆಗಿದೆ. ಈ ಪಕ್ಷದ ಸಿದ್ದಾಂತದಲ್ಲಿ ಎಲ್ಲಿಯೂ ಅಶಾಂತಿ ವಾತಾವರಣ ಸೃಷ್ಟಿಸುವ ಗುರಿಯೇ ಇಲ್ಲ. ಅಷ್ಟೇ ಅಲ್ಲದೆ, ಯಾರ ಪ್ರಾಣ ಹಾನಿಗೂ ನಾವು ಮುಂದಾಗುವುದಿಲ್ಲ. ಬಿಜೆಪಿ ಮತ್ತು ಸಂಘಪರಿವಾರಕ್ಕೆ ನಾವು ಸೈದ್ದಾಂತಿಕವಾಗಿ ಉತ್ತರ ನೀಡುತ್ತೇವೆಯೇ ಹೊರತು, ಹಲ್ಲೆಗಳಿಂದಲ್ಲ ಎಂದು ಅವರು ಹೇಳಿದರು.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಮೇಲೆ ನಮಗೆ ಗೌರವ ಇದೆ. ಆದರೆ, ಯಾವುದೇ ರೀತಿಯ ತನಿಖೆ ನಡೆಸದೆ, ಬಂಧಿತರು ಎಲ್ಲರೂ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರು, 10 ಸಾವಿರ ಪಡೆಯುತ್ತಿದ್ದರು ಎಂದೆಲ್ಲಾ ಕತೆ ಕಟ್ಟಿದ್ದಾರೆ. ಅವರು ರಾಜಕಾರಣಿಗಳ ಒತ್ತಡಕ್ಕೆ ಮಣಿದಿದ್ದಾರೆ ಎಂದು ಆರೋಪ ಮಾಡಿದರು.

ಪಕ್ಷದ ಮೇಲೆ ಸುಳ್ಳು ಆರೋಪ ಮಾಡಿರುವ ಪೊಲೀಸ್ ಆಯುಕ್ತರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದ ಅವರು, ಬಿಜೆಪಿ ಮತ್ತು ಸಂಘಪರಿವಾರಕ್ಕೆ ಈ ರಾಜ್ಯದಲ್ಲಿ ಎಸ್‌ಡಿಪಿಐ ಬೆಳೆಯುವುದು ಇಷ್ಟವಿಲ್ಲ. ಹಾಗಾಗಿಯೇ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News