ಪಿಎಫ್‌ಐ, ಎಸ್‌ಡಿಪಿಐ ಸೇರಿ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳ ನಿಷೇಧಕ್ಕೆ ಶಿಫಾರಸ್ಸು

Update: 2020-01-17 15:28 GMT

ಬೆಂಗಳೂರು, ಜ.17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ), ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಸೇರಿದಂತೆ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ಸಂಘಟನೆಗಳಿರಲಿ ಅವುಗಳ ನಿಷೇಧಕ್ಕೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಅದನ್ನು ಬೆಂಗಳೂರು ಸೇರಿದಂತೆ ರಾಜ್ಯದ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಆತಂಕಕಾರಿ ಬೆಳವಣಿಗೆಗಳಿಗೆ ಕಾರಣಕರ್ತರಾಗಿರುವವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಈ ಹಿಂದಿನ ಸರಕಾರ ವಾಪಸ್ ಪಡೆದಿತ್ತು. ಇದರಿಂದ, ಮತ್ತಷ್ಟು ಅನಾಹುತಕಾರಿ ಬೆಳವಣಿಗೆಗಳು ನಡೆದಿವೆ ಎಂದು ಅವರು ಹೇಳಿದರು.

ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಮೇಲೆ ನಡೆದಂತಹ ಮಾರಣಾಂತಿಕ ಹಲ್ಲೆ, ನಮ್ಮ ಸಂಘಟನೆಯ ಕಾರ್ಯಕರ್ತರ ಕೊಲೆ, ಮಾರಣಾಂತಿಕ ಹಲ್ಲೆಗಳು ಸೇರಿದಂತೆ ಹಲವಾರು ಘಟನೆಗಳು ಕಳೆದ 7-8 ವರ್ಷಗಳ ಅವಧಿಯಲ್ಲಿ ನಡೆದಿವೆ. ಆದುದರಿಂದ, ಪಿಎಫ್‌ಐ ಹಾಗೂ ಎಸ್‌ಡಿಪಿಐ ಚಟುವಟಿಕೆಗಳನ್ನು ನಿಯಂತ್ರಿಸಿ, ಅವುಗಳನ್ನು ನಿಷೇಧಿಸಲು ಕಾನೂನಾತ್ಮಕವಾಗಿ ಅನುಸರಿಸಬೇಕಾದ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಈ ಸಂಘಟನೆಗಳು ಹಲವಾರು ಹೆಸರುಗಳಿಂದ ಕಾರ್ಯನಿರ್ವಹಿಸುತ್ತವೆ. ಒಂದು ಹೆಸರಿನ ಸಂಘಟನೆಯನ್ನು ನಿಷೇಧಿಸಿದರೆ ಮತ್ತೊಂದು ಹೆಸರಿನಲ್ಲಿ ಕಾರ್ಯ ಪ್ರವೃತ್ತರಾಗುತ್ತಾರೆ. ಆದುದರಿಂದ, ಈ ಸಂಬಂಧ ಸಮಗ್ರ ವರದಿ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ವರದಿ ಬಂದ ಬಳಿಕ ಕಾನೂನು ಇಲಾಖೆ ಜೊತೆ ಸಮಾಲೋಚನೆ ನಡೆಸಿ, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News