ಪೌರತ್ವ ಕಾಯ್ದೆ ರೂಪುಗೊಂಡಿದ್ದು ಆರೆಸ್ಸೆಸ್ ಕೇಂದ್ರದಲ್ಲಿ: ಹಿರಿಯ ನ್ಯಾಯವಾದಿ ಬಾಲನ್ ಆರೋಪ

Update: 2020-01-17 16:40 GMT

ಬೆಂಗಳೂರು, ಜ.17: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಎನ್ನುವುದು ಬ್ರಾಹ್ಮಣವಾದ ಹಾಗೂ ಜಾತಿವಾದವೇ ಆಗಿದೆ. ಹೀಗಾಗಿ ಇದು ದೇಶವಿರೋಧಿ, ಮಾನವೀಯತೆಯ ವಿರೋಧಿಯಾಗಿದೆ ಎಂದು ಹಿರಿಯ ನ್ಯಾಯವಾದಿ ಬಾಲನ್ ಆರೋಪಿಸಿದ್ದಾರೆ. 

ಶುಕ್ರವಾರ ನಾವು ಭಾರತೀಯ ಜಂಟಿ ಕ್ರಿಯಾ ಸಮಿತಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಸಿಎಎ, ಎನ್‌ಆರ್‌ಸಿ ವಿರೋಧಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಸಿಎಎ ಕಾಯ್ದೆ ರೂಪಗೊಂಡಿದ್ದು, ರಾಜಕೀಯ ತಜ್ಞರಿಂದಲ್ಲ, ನ್ಯಾಯಾಂಗ ತಜ್ಞರಿಂದಲ್ಲ, ಜನಪ್ರತಿನಿಧಿಗಳಿಂದಲ್ಲ. ಬದಲಿಗೆ, ನಾಗಪುರದಲ್ಲಿರುವ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ರೂಪಿಸಲಾಗಿದೆ ಎಂದು ತಿಳಿಸಿದರು.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪ್ಘಾನಿಸ್ತಾನದಲ್ಲಿರುವ ಹಿಂದೂಗಳಿಗೆ ಪೌರತ್ವ ಕೊಡುತ್ತಾರೆ. ಆದರೆ, ಶ್ರೀಲಂಕಾದಲ್ಲಿರುವ ತಮಿಳು ಹಿಂದೂಗಳಿಗೆ ಯಾಕೆ ಪೌರತ್ವದಿಂದ ಹೊರಗಿಟ್ಟಿದ್ದಾರೆ. ಇವರ ಉದ್ದೇಶವೇನೆಂದರೆ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿರುವ ಬ್ರಾಹ್ಮಣ ಹಾಗೂ ಬನಿಯಾ ಹಿಂದೂಗಳಿಗೆ ಮಾತ್ರ ಅವಕಾಶ ಮಾಡಿಕೊಡುವುದು. ಶ್ರೀಲಂಕಾದಲ್ಲಿರುವ ಶೂದ್ರ, ದಲಿತ ಹಿಂದೂಗಳನ್ನು ಹೊರಗಿಡುವುದೇ ಆಗಿದೆ ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು, ಜಾತ್ಯತೀತತೆ, ಸಮಾನತೆ, ಬ್ರಾತೃತ್ವಕ್ಕೆ ಸಂಬಂಧಿಸಿದ ಕಾನೂನುಗಳನ್ನು ಓದಬೇಕು. ಸಿಎಎ ಎನ್ನುವುದು ಸಂವಿಧಾನದ ಮೂಲ ಆಶಯಗಳಿಗೆ ವಿರೋಧವಾಗಿದೆ. ಈ ಕಾಯ್ದೆ ಕೇವಲ ಮುಸ್ಲಿಮರಿಗೆ ಮಾತ್ರ ವಿರೋಧವಲ್ಲ, ಸಮಸ್ತ ಭಾರತೀಯರಿಗೆ ಕಂಟಕಪ್ರಾಯವಾದದ್ದೆಂದು ಅವರು ಆತಂಕ ವ್ಯಕ್ತಪಡಿಸಿದರು.

ಸಿಎಎಯಂತಹ ಮಾನವ ವಿರೋಧಿ ಕಾಯ್ದೆಯನ್ನು ಜಾರಿ ಮಾಡಲು ಆರೆಸ್ಸೆಸ್ ಹಾಗೂ ಬಿಜೆಪಿಯೆಂಬ ಕೋಮುವಾದಿ ಶಕ್ತಿಗಳಿಗೆ ಮಾತ್ರ ಸಾಧ್ಯ. ಅಮೆರಿಕಾ, ಕೆನಡಾ, ಜರ್ಮನಿ, ಜಪಾನ್ ಸೇರಿದಂತೆ ವಿಶ್ವಾದ್ಯಂತ ಕೋಟ್ಯಂತರ ಹಿಂದೂಗಳು ವಾಸಿಸುತ್ತಿದ್ದಾರೆ. ಆ ದೇಶಗಳು ಬಿಜೆಪಿ ಜಾರಿ ಮಾಡಿರುವಂತೆ ಸಿಎಎ ಕಾಯ್ದೆ ರೂಪಿಸಿದರೆ ಹಿಂದೂಗಳು ಎಂತಹ ಸಂಕಷ್ಟಕ್ಕೆ ಸಿಲುಕಲಿದ್ದಾರೆಂಬ ಊಹಿಸಲು ಸಾಧ್ಯವೇ. ಹೀಗಾಗಿ ಬಿಜೆಪಿ ಸಿದ್ದಾಂತ ಹಿಂದೂ ವಿರೋಧಿಯಾದದ್ದೆಂದು ಅವರು ಆಪಾದಿಸಿದರು.

ಭಾರತದ ಮೊದಲ ಸ್ವಾತಂತ್ರ ಸಂಗ್ರಾಮವು ವೀರ ಸೇನಾನಿ ಟಿಪ್ಪು ಸುಲ್ತಾನ್ ನೇತೃತ್ವದಲ್ಲಿ ನಡೆಯಿತು. ಹೀಗೆ ಸ್ವಾತಂತ್ರ ಹೋರಾಟದಲ್ಲಿ ಲಕ್ಷಾಂತರ ಮುಸ್ಲಿಮರು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ಆದರೆ, ಆರೆಸ್ಸೆಸ್ ಯಾವತ್ತೂ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲ. ಬದಲಿಗೆ, ಬ್ರಿಟಿಷರಿಗೆ ಪೂರಕವಾಗಿ ಕೆಲಸ ಮಾಡಿದವರು. ಇಂತಹವರಿಂದ ನಾವು ದೇಶಪ್ರೇಮದ ಪಾಠ ಕಲಿಯಬೇಕಿಲ್ಲ ಎಂದು ಅವರು ಹೇಳಿದರು. ಈ ವೇಳೆ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ದೇಶದ ಸೈನ್ಯ, ಆಡಳಿತ, ನ್ಯಾಯಾಲಯ, ವಿಶ್ವವಿದ್ಯಾಲಯಗಳಲ್ಲಿ ಒಟ್ಟು ಸುಮಾರು 3600 ಉನ್ನತ ಹುದ್ದೆಗಳಿವೆ. ಅದರಲ್ಲಿ 2750 ಹುದ್ದೆಗಳಲ್ಲಿ ಬ್ರಾಹ್ಮಣ ಅಧಿಕಾರಿಗಳೇ ಇದ್ದಾರೆ. ಇಡೀ ಭಾರತ ಬ್ರಾಹ್ಮಣರ ವಶದಲ್ಲಿದೆ. ಇನ್ನು ವ್ಯಾಪಾರ, ವ್ಯವಹಾರ ಬನಿಯಾಗಳ ಕೈಯಲ್ಲಿದೆ. ಇದನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಜನವಿರೋಧಿ ಕಾನೂನನ್ನು ಜಾರಿ ಮಾಡಲು ಮುಂದಾಗಿದ್ದಾರೆ.

-ಬಾಲನ್, ಹಿರಿಯ ನ್ಯಾಯವಾದಿ

ಅನುಮತಿ-ವಾಗ್ವಾದ

ದೇಶದ ವಿಶ್ವವಿದ್ಯಾಲಯಗಳಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿ ಪಡಿಸಿ, ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿದ್ದಾರೆಂದು ಆರೋಪಿಸಿ ಸ್ವಾತಂತ್ರ ಉದ್ಯಾನವನದಲ್ಲಿ ಬೆಂಗಳೂರು ವಿದ್ಯಾರ್ಥಿ ಒಕ್ಕೂಟ ಹಮ್ಮಿಕೊಂಡಿದ್ದ ಎರಡು ದಿನಗಳ ಧರಣಿಗೆ ಪೊಲೀಸರು ಅನುಮತಿ ಕೊಟ್ಟಿಲ್ಲ. ಈ ವೇಳೆ ವಿದ್ಯಾರ್ಥಿ ಹಾಗೂ ಪೊಲೀಸರ ನಡುವೆ ವಾ್ವಾದ ನಡೆದ ಪ್ರಸಂಗ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News