ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಗೆ ಹೈಕೋರ್ಟ್ ಹಸಿರು ನಿಶಾನೆ

Update: 2020-01-17 16:42 GMT

ಬೆಂಗಳೂರು, ಜ.17: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) 12 ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಗಳಿಗೆ ಜ.18ರಂದು ನಡೆಯುವ ಚುನಾವಣೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಚುನಾವಣೆ ಮುಂದೂಡಿಕೆ ಕೋರಿ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ, ಸೌಮ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಗೆ ಹಸಿರು ನಿಶಾನೆ ತೋರಿತು. ಜ.18ರಂದು ನಡೆಯುತ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಗೆ ಯಾವುದೇ ಅಡ್ಡಿ ಇಲ್ಲ. ಗೌಪ್ಯ ಮತದಾನ ನಡೆಸಿದರೆ ಹೈಕೋರ್ಟ್‌ಗೆ ವಿವರ ಸಲ್ಲಿಸಲು ಬಿಬಿಎಂಪಿಗೆ ಸೂಚನೆ ನೀಡಿದೆ.

ಜೆಡಿಎಸ್, ಕಾಂಗ್ರೆಸ್‌ನ 18 ಪಾಲಿಕೆ ಸದಸ್ಯರ ಅನರ್ಹತೆ ದೂರು ಬಾಕಿ ಇರುವ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಚುನಾವಣೆಗೆ ತಡೆ ಕೋರಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಅ.1ರಂದು ನಡೆದ ಚುನಾವಣಾ ದಿನವೇ 4 ಸ್ಥಾಯಿ ಸಮಿತಿಗಳಿಗೆ ಚುನಾವಣೆ ಘೋಷಿಸಲಾಗಿತ್ತು. ಆದರೆ, ಯಾರೊಬ್ಬರೂ ನಾಮಪತ್ರ ಸಲ್ಲಿಸದಿರುವುದರಿಂದ ಚುನಾವಣೆ ಮುಂದೂಡಲಾಗಿತ್ತು. ಮತ್ತೆ ಡಿ. 4ರಂದು ಪುರಭವನದಲ್ಲಿ ಚುನಾವಣೆ ಗೊತ್ತುಪಡಿಸಲಾಗಿತ್ತು. ಆಗಲೂ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಮತ್ತೆ ಡಿ. 30ರಂದು ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಂದು ಸಹ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಚುನಾವಣೆ ಮುಂದೂಡಲ್ಪಟ್ಟಿತ್ತು.

ಸದ್ಯ ಎಲ್ಲ 12 ಸ್ಥಾಯಿ ಸಮಿತಿಗಳ ಸದಸ್ಯರು, ಅಧ್ಯಕ್ಷರ ಅಧಿಕಾರ ಅವಧಿಯು ಡಿ. 5ಕ್ಕೆ ಕೊನೆಗೊಂಡಿತ್ತು. ಹೀಗಾಗಿ, ಪಾಲಿಕೆಯಲ್ಲಿ ಸದ್ಯಕ್ಕೆ ಯಾವುದೇ ಸ್ಥಾಯಿ ಸಮಿತಿಗಳು ಅಸ್ತಿತ್ವದಲ್ಲಿ ಇರಲಿಲ್ಲ. ಶುಕ್ರವಾರ ಹೈಕೋರ್ಟ್ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಗಳ ಚುನಾವಣೆಗೆ ಹಸಿರು ನಿಶಾನೆ ತೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News