ಜ.20ರಿಂದ 24ರವರೆಗೆ ದಾವೋಸ್ ಸಮಾವೇಶ: ಸಿಎಂ ನೇತೃತ್ವದ ನಿಯೋಗ ಭಾಗಿ- ಜಗದೀಶ್ ಶೆಟ್ಟರ್

Update: 2020-01-17 17:14 GMT

ಬೆಂಗಳೂರು, ಜ.17: ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕಾನಾಮಿಕ್ ಫೋರಂ) ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ಜ.20 ರಿಂದ 24 ರವರೆಗೆ ಜಾಗತಿಕ ಮಟ್ಟದ ಅದ್ಧೂರಿ ಸಮಾವೇಶ ಆಯೋಜಿಸಿದ್ದು, ಈ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ ಭಾಗವಹಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಶುಕ್ರವಾರ ನಗರದ ಖನಿಜ ಭವನದಲ್ಲಿರುವ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ನಡೆಯಲಿರುವ ಈ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ. ನಮ್ಮ ರಾಜ್ಯದಲ್ಲಿ ಕೈಗಾರಿಕಾ ಹೂಡಿಕೆಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನಮಗೆ ಉತ್ತಮ ವೇದಿಕೆ ಸಿಕ್ಕಿದಂತಾಗಿದೆ ಎಂದರು.

ಈ ಸಮಾವೇಶದಲ್ಲಿ ಉದ್ಯಮಿಗಳು, ವಾಣಿಜ್ಯೋದ್ಯಮಿಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಐಟಿ ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಮುಖ್ಯಮಂತ್ರಿಯ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ತೆರಳಲಿದ್ದಾರೆ ಎಂದು ಅವರು ಹೇಳಿದರು.

ಜ.20ರಂದು ದಾವೋಸ್‌ನಲ್ಲಿ ಕರ್ನಾಟಕ ಪೆವಿಲಿಯನ್ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮಾವೇಶದಲ್ಲಿ 40 ಕ್ಕೂ ಹೆಚ್ಚು ಸಭೆಗಳು ನಡೆಯಲಿದ್ದು, ಮುಖ್ಯ ಸಮಾರಂಭದಲ್ಲಿ ಯಡಿಯೂರಪ್ಪ ಭಾಷಣ ಮಾಡಲಿದ್ದಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

40 ಕ್ಕೂ ಹೆಚ್ಚು ಜಾಗತಿಕ ಮಟ್ಟದ ಕಂಪೆನಿಗಳ ಜತೆಯಲ್ಲಿ ಯಡಿಯೂರಪ್ಪ, ಪ್ರತ್ಯೇಕವಾಗಿ ಮಾತುಕತೆ ನಡೆಸಲು ಸಭೆ ನಿಗದಿಯಾಗಿದ್ದು, ಪ್ರಮುಖವಾಗಿ ಲಾಕ್ ಹೀಡ್ ಮಾರ್ಟಿನ್, ಲುಲು ಗ್ರೂಪ್, ಡಸಾಲ್ಟ್ ಸಿಸ್ಟಮ್ಸ್, ಎಚ್‌ಪಿ, ಎಸ್‌ಎಪಿ, ಮಿತ್ಸುಬಿಷಿ, ಜಿಇ, ನೋವಾ ನೊರ್ಡಿಸ್ಕ್, ಡೆನ್ಸೊ, ಅದಾನಿ, ಪಿಜಿ, ಐಕೆಇಎ, ವೋಲ್ವೋ ಮತ್ತಿತರ ಕಂಪೆನಿಗಳೊಂದಿಗೆ ಸಭೆ ನಡೆಸಿ ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.

ಜಿಮ್ ಕರ್ಟನ್ ರೈಸರ್: ವಿಶ್ವದಾದ್ಯಂತ ಉದ್ದಿಮೆದಾರರು ಆಗಮಿಸುವ ಈ ಸಮಾವೇಶದಲ್ಲಿಯೆ ಜ.22ರಂದು ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್) ಕರ್ಟನ್ ರೈಸರ್ ನೆರವೇರಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು. 2020ರ ನವೆಂಬರ್ 3 ರಿಂದ 5 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ‘ಇನ್ವೆಸ್ಟ್ ಕರ್ನಾಟಕ 2020’ ಜಾಗತಿಕ ಹೂಡಿಕೆದಾರರ ಸಮಾವೇಶದ ಘೋಷಣೆ ಮಾಡಲಾಗುತ್ತದೆ. ಜೊತೆಗೆ, ಇನ್ವೆಸ್ಟ್ ಕರ್ನಾಟಕದಲ್ಲಿ ಭಾಗವಹಿಸುವಂತೆ ಪ್ರಮುಖ ನಾಯಕರು ಮತ್ತು ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲಾಗುವುದು. ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಆಹ್ವಾನಿಸಲು ದಾವೋಸ್ ಸಮಾವೇಶ ಉತ್ತಮ ವೇದಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ನವೆಂಬರ್‌ನಲ್ಲಿ ನಡೆಯುವ ಗ್ಲೋಬಲ್ ಇನ್ವೆಸ್ಟರ್ ಮೀಟ್ ಸಮಾರಂಭ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಆಹ್ವಾನಿಸಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ದ್ವಿತೀಯ ಹಂತದ ನಗರಗಳಿಗೆ ಆದ್ಯತೆ: ಬೆಂಗಳೂರು ಹೊರತು ಪಡಿಸಿ ಟೂ ಟಯರ್ ಸಿಟಿ(ದ್ವಿತೀಯ ಹಂತದ ನಗರ)ಗಳಲ್ಲಿ ಹೂಡಿಕೆಗೆ ವಿಫುಲ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಫೆ.14ರಂದು ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಇದರ ಭಾಗವಾಗಿ ಹೈದರಾಬಾದ್‌ನಲ್ಲಿ ಜ.29ರಂದು ರೋಡ್ ಶೋ ಹಮ್ಮಿಕೊಳ್ಳುವ ಮೂಲಕ ರಾಜ್ಯದ ಟೂ ಟಯರ್ ಸಿಟಿಗಳಲ್ಲಿ ಹೂಡಿಕೆಗೆ ಆಹ್ವಾನಿಸಲಾಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ರೋಡ್ ಶೋ ನಡೆಸಿ ಕೆಲ ದೊಡ್ಡ ಉದ್ದಿಮೆದಾರರನ್ನು ಆಹ್ವಾನಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಇದರ ಜೊತೆಗೆ ನೂತನ ಕೈಗಾರಿಕಾ ನೀತಿ ಸಿದ್ಧವಾಗುತ್ತಿದೆ. ಕರಡು ಪ್ರತಿ ಸಿದ್ಧವಾಗಿ ಇತರೆ ಇಲಾಖೆಗಳಿಂದ ಅಭಿಪ್ರಾಯ ಸಂಗ್ರಹದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಕೈಗಾರಿಕೆಗಳಿಗೆ ಪ್ರತ್ಯೇಕ ತೆರಿಗೆ ನೀತಿ ತರಲು ಚಿಂತಿಸಲಾಗಿದೆ. ಕೈಗಾರಿಕೆಗಳಿಗೆ ವಾಣಿಜ್ಯ ಅಥವಾ ರೆಸಿಡೆನ್ಷಿಯಲ್ ತೆರಿಗೆ ಈ ಎರಡರಲ್ಲಿ ಯಾವ ತೆರಿಗೆ ವಿಧಿಸಬೇಕು ಎಂಬ ಗೊಂದಲವಿದೆ. ಈ ಗೊಂದಲ ನಿವಾರಣೆಗೆ ಏಕ ರೂಪದ ತೆರಿಗೆ ನಿಗದಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News