ಶಫೀಖುಲ್ಲಾ ದಾಳಿಗೆ ದಕ್ಷಿಣ ಆಫ್ರಿಕಾ ಧೂಳೀಪಟ: ಅಫ್ಘಾನಿಸ್ತಾನ ಶುಭಾರಂಭ

Update: 2020-01-17 18:47 GMT

ಕಿಂಬರ್ಲಿ, ಜ.17: ಆತಿಥೇಯ ದಕ್ಷಿಣ ಆಫ್ರಿಕಾದ ತಂಡ ಶುಕ್ರವಾರ ಇಲ್ಲಿ ಆರಂಭವಾದ ಐಸಿಸಿ ಅಂಡರ್-19 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಸೋಲುಂಡಿದೆ.

  ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಲೆಗ್ ಸ್ಪಿನ್ನರ್ ಶಫೀಖುಲ್ಲಾ ಗಫ್ಫಾರಿ ಸ್ಪಿನ್ ಮೋಡಿಗೆ ತತ್ತರಿಸಿ 29.1 ಓವರ್‌ಗಳಲ್ಲಿ ಕೇವಲ 129 ರನ್ ಗಳಿಸಿ ಆಲೌಟಾಗಿದೆ. ಗೆಲ್ಲಲು ಸುಲಭ ಸವಾಲು ಪಡೆದ ಅಫ್ಘಾನಿಸ್ತಾನ 25 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 130 ರನ್ ಗಳಿಸಿತು. ಆಫ್ರಿಕಾ ತಂಡವನ್ನು ಷಫೀಖುಲ್ಲ್ಲಾ(6-15)ಇನ್ನಿಲ್ಲದಂತೆ ಕಾಡಿದರು. ನಾಯಕ ಪರ್ಸನ್ಸ್(40, 42)ಸರ್ವಾಧಿಕ ಸ್ಕೋರ್ ಗಳಿಸಿದರು. ಷಫೀಖುಲ್ಲ್ಲಾ 12ನೇ ಓವರ್‌ನಲ್ಲಿ ಬೌಲಿಂಗ್ ದಾಳಿಗಿಳಿದಾಗ ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿತ್ತು. ಗೂಗ್ಲಿ ಬೌಲಿಂಗ್ ಸ್ಪೆಷಲಿಸ್ಟ್ ಶಫಿಖುಲ್ಲಾ ಅವರು ಲಾವೆರ್ಟ್ ಮಂಜೆ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ವಿಕೆಟ್ ಬೇಟೆ ಆರಂಭಿಸಿದರು. ದಕ್ಷಿಣ ಆಫ್ರಿಕಾದ ಕೊನೆಯ 4 ವಿಕೆಟ್‌ಗಳನ್ನು ಉರುಳಿಸಿದ ಷಫೀಖುಲ್ಲಾ ಕೇವಲ 29.1 ಓವರ್‌ಗಳಲ್ಲಿ ಆಲೌಟ್ ಮಾಡಿದರು. ಅವರು 9.1 ಓವರ್‌ಗಳಲ್ಲಿ 15 ರನ್ ನೀಡಿ ಆರು ವಿಕೆಟ್‌ಗಳನ್ನು ಪಡೆದರು. ನಾಲ್ವರು ದ.ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದರು.ಈ ಪೈಕಿ ಮೂವರು ಷಫೀಖುಲ್ಲ್ಲಾಗೆ ವಿಕೆಟ್ ಒಪ್ಪಿಸಿದರು. ಷಫೀಖುಲ್ಲಾ ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ 8ನೇ ಶ್ರೇಷ್ಠ ಬೌಲಿಂಗ್ ಮಾಡಿದರು. ಇದಕ್ಕೂ ಮೊದಲು ಷಫೀಖುಲ್ಲಾ ಭಾರತದ ಅಂಡರ್-19 ತಂಡದ ವಿರುದ್ಧವೇ ಎಲ್ಲ ಯೂತ್ ಏಕದಿನ ಪಂದ್ಯಗಳನ್ನು ಆಡಿದ್ದರು. ಕಾಬೂಲ್ ಪರ 3 ಪ್ರಥಮದರ್ಜೆ ಪಂದ್ಯಗಳಲ್ಲಿ ಆಡಿದ್ದ ಷಫೀಖುಲ್ಲಾ ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿದ್ದರು. ಗೆಲ್ಲಲು 130 ರನ್ ಗುರಿ ಪಡೆದಿದ್ದ ಅಫ್ಘಾನಿಸ್ತಾನ ತಂಡ ಆರಂಭಿಕ ಬ್ಯಾಟ್ಸ್‌ಮನ್ ಇಬಾಹೀಂ ಝದ್ರಾನ್(52,72 ಎಸೆತ, 8 ಬೌಂಡರಿ)ಹಾಗೂ ಇಮ್ರಾನ್(57, 48 ಎಸೆತ, 10 ಬೌಂಡರಿ)ಅರ್ಧಶತಕದ ಕೊಡುಗೆಯ ನೆರವಿನಿಂದ ಇನ್ನೂ 25 ಓವರ್‌ಗಳ ಆಟ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ಕ್ಲೋಟ್(2-20)ಎರಡೂ ವಿಕೆಟ್‌ಗಳನ್ನು ತನ್ನದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News