ವಿಮಾನದ ಬ್ಲಾಕ್‌ಬಾಕ್ಸ್‌ಗಳನ್ನು ವಿಶ್ಲೇಷಣೆಗೆ ಫ್ರಾನ್ಸ್‌ಗೆ ಕಳುಹಿಸಿ ; ಇರಾನ್‌ಗೆ ಕೆನಡ ಪ್ರಧಾನಿ ಒತ್ತಾಯ

Update: 2020-01-18 15:49 GMT

ಒಟ್ಟಾವ (ಕೆನಡ), ಜ. 18: ಇರಾನ್ ಸೇನೆಯು ಜನವರಿ 8ರಂದು ಹೊಡೆದುರುಳಿಸಿದ ಯುಕ್ರೇನ್ ಏರ್‌ಲೈನ್ಸ್ ವಿಮಾನದ ಬ್ಲಾಕ್‌ಬಾಕ್ಸ್‌ಗಳನ್ನು ಫ್ರಾನ್ಸ್‌ಗೆ ನೀಡುವಂತೆ ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಶುಕ್ರವಾರ ಇರಾನನ್ನು ಒತ್ತಾಯಿಸಿದ್ದಾರೆ. ಬ್ಲಾಕ್‌ಬಾಕ್ಸ್‌ಗಳನ್ನು ಸರಿಯಾಗಿ ಪರಿಶೀಲಿಸಬಲ್ಲ ಪ್ರಯೋಗಾಲಯಗಳ ಪೈಕಿ ಒಂದು ಫ್ರಾನ್ಸ್‌ನಲ್ಲಿದೆ ಎಂದು ಅವರು ಹೇಳಿದ್ದಾರೆ.

‘‘ಹಾನಿಗೀಡಾಗಿರುವ ಬ್ಲಾಕ್‌ಬಾಕ್ಸ್‌ಗಳನ್ನು ಶೀಘ್ರವಾಗಿ ವಿಶ್ಲೇಷಿಸಬಲ್ಲ ತಾಂತ್ರಿಕ ಪರಿಣತಿಯನ್ನು ಹಾಗೂ ಅಗತ್ಯ ಉಪಕರಣಗಳನ್ನು ಇರಾನ್ ಹೊಂದಿಲ್ಲ’’ ಎಂದು ಟ್ರೂಡೊ ನುಡಿದರು.

ಯುಕ್ರೇನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನ ಪಿಎಸ್752 ವಿಮಾನದ ತನಿಖೆಯಲ್ಲಿ ಕೆನಡದ ತನಿಖಾದಾರರಿಗೆ ಹೆಚ್ಚಿನ ಅವಕಾಶ ಒದಗಿಸುವಂತೆ ಕೆನಡವು ಇರಾನ್ ಅಧಿಕಾರಿಗಳನ್ನು ಒತ್ತಾಯಿಸುತ್ತಿದೆ ಎಂದು ಕೆನಡದ ಸಾರಿಗೆ ಸಚಿವ ಮಾರ್ಕ್ ಗಾರ್ನೊ ಹೇಳಿದ್ದಾರೆ.

ಬ್ಲಾಕ್‌ಬಾಕ್ಸ್‌ಗಳಿಂದ ಸರಿಯಾದ ಮಾಹಿತಿಯನ್ನು ಪಡೆಯುವುದಕ್ಕಾಗಿ ಅವುಗಳನ್ನು ಕಳುಹಿಸಬೇಕಾದ ಸರಿಯಾದ ಸ್ಥಳವೆಂದರೆ ಫ್ರಾನ್ಸ್ ಎಂದು ಗಾರ್ನೊ ನುಡಿದರು.

ಸಿಬ್ಬಂದಿ-ಪ್ರಯಾಣಿಕರು ಸೇರಿದಂತೆ ವಿಮಾನದಲ್ಲಿದ್ದ ಒಟ್ಟು 176 ಮಂದಿಯ ಪೈಕಿ 138 ಮಂದಿ ಯುಕ್ರೇನ್ ಮೂಲಕ ಕೆನಡಕ್ಕೆ ಪ್ರಯಾಣಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News