5 ವರ್ಷಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಿಂದ ವಿಮಾನ ಹಾರಾಟ: ಪ್ರದೀಪ್‌ ಸಿಂಗ್ ಖರೋಲಾ

Update: 2020-01-18 17:04 GMT

ಬೆಂಗಳೂರು, ಜ.18: ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳಿಂದಲೂ ವಿಮಾನಗಳು ಹಾರಾಟ ನಡೆಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್‌ಸಿಂಗ್ ಖರೋಲಾ ತಿಳಿಸಿದರು.

ಶನಿವಾರ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ವಿಂಗ್ಸ್ ಇಂಡಿಯಾ-2020 ಹಿನ್ನೆಲೆಯಲ್ಲಿ ಉದ್ಯಮಿಗಳ ಜತೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭವಿಷ್ಯದಲ್ಲಿ ದೇಶ ವ್ಯಾಪ್ತಿ ವಿಮಾನ ನಿಲ್ದಾಣಗಳು ಮತ್ತು ಹೆಲಿಪೋರ್ಟ್‌ಗಳ ಸಂಖ್ಯೆ ದುಪ್ಪಟ್ಟಾಗಲಿದೆ. ಅಲ್ಲದೆ, ಕಳೆದ ಐದು ವರ್ಷಗಳಲ್ಲಿ 40ಕ್ಕೂ ಅಧಿಕ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು (ಹೆಲಿಕಾಪ್ಟರ್ ನಿಲ್ದಾಣ) ತಲೆಯೆತ್ತಿವೆ ಎಂದರು.

ಇತ್ತೀಚೆಗೆ ಕಲಬುರ್ಗಿಯಿಂದ ವಿಮಾನ ಹಾರಾಟ ಆರಂಭಗೊಂಡಿದೆ. ಶೀಘ್ರದಲ್ಲೇ ಬೀದರ್ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಲಿದೆ. ಬರುವ ವರ್ಷದಲ್ಲಿ ಇನ್ನೂ ಎರಡು-ಮೂರು ವಿಮಾನ ನಿಲ್ದಾಣಗಳು ಸೇವೆಗೆ ಸಿದ್ಧಗೊಳ್ಳಲಿವೆ ಎಂದ ಅವರು, ಪ್ರತಿ ವರ್ಷ ನಮಗೆ 700ರಿಂದ 800 ಪೈಲಟ್‌ಗಳ ಅವಶ್ಯಕತೆ ಇದೆ. ಆದರೆ, ಸದ್ಯ 300 ಪೈಲಟ್‌ಗಳ ಪೂರೈಕೆ ಆಗುತ್ತಿದೆ. ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಅವಶ್ಯಕತೆ ಇದೆ. ಜತೆಗೆ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಮರುಪರಿಶೀಲನೆಗೊಳಪಡಿಸಿ, ಸಡಿಲಗೊಳಿಸುವ ಅಗತ್ಯವೂ ಇದೆ ಎಂದು ತಿಳಿಸಿದರು.

ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಮಾತನಾಡಿ, ಕೆಲವೇ ವಾರಗಳಲ್ಲಿ ಬೀದರ್ ವಿಮಾನ ನಿಲ್ದಾಣವು ಸೇವೆಗೆ ಮುಕ್ತವಾಗಲಿದೆ. ಬರುವ ವರ್ಷ ಶಿವಮೊಗ್ಗ, ವಿಜಯಪುರ, ಕಾರವಾರ ಮತ್ತು ಹಾಸನದಿಂದ ವಿಮಾನಗಳು ಹಾರಾಟ ನಡೆಸಲಿದ್ದು, ಭವಿಷ್ಯದಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಿಂದ ವಿಮಾನ ನಿಲ್ದಾಣ ಸ್ಥಾಪನೆ ಗುರಿ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಧೀ, ಮಾನವ ಬಾಹ್ಯಾಕಾಶ ವೈಮಾನಿಕ ಕೇಂದ್ರ (ಎಚ್‌ಎಸ್‌ಎಫ್‌ಸಿ) ಸ್ಥಾಪಕ ಅಧ್ಯಕ್ಷ ಉನ್ನಿಕೃಷ್ಣನ್ ನಾಯರ್, ಬಿಐಎಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಮರಾರ್ ಮತ್ತಿತರರು ಪಾಲ್ಗೊಂಡಿದ್ದರು.

ಡ್ರೋನ್; ಮನವಿ

ಎಲ್ಲ ಪ್ರಕಾರದ ಡ್ರೋನ್‌ಗಳು ಮತ್ತು ಅವುಗಳನ್ನು ನಿರ್ವಹಣೆ ಮಾಡುವವರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಸುರಕ್ಷತೆ ದೃಷ್ಟಿಯಿಂದ ಇದು ಬಹುಮುಖ್ಯ. ಈ ದತ್ತಾಂಶಗಳ ಸಂಗ್ರಹ ಪ್ರಕ್ರಿಯೆ ಪೂರ್ಣಗೊಂಡ ನಂತರ ಡ್ರೋನ್ ಕಾರ್ಯಾಚರಣೆಗೆ ಪರವಾನಿಗೆಗಳನ್ನು ನೀಡಲಾಗುವುದು. ಈ ಸಂಬಂಧದ ನಿಯಮಗಳು ಉದ್ಯಮ ಸ್ನೇಹಿ ಆಗಿರಲಿವೆ. ಇದರಲ್ಲಿ ಯಾವುದೇ ಅನುಮಾನಗಳು ಬೇಡ ಎಂದು ಪ್ರದೀಪ್‌ಸಿಂಗ್ ಖರೋಲಾ ತಿಳಿಸಿದರು.

‘ವಿಂಗ್ಸ್ ಇಂಡಿಯಾ-2020’ ಮಾರ್ಚ್ 12ರಿಂದ 15ರವರೆಗೆ ಹೈದರಾಬಾದ್‌ನ ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ನಡೆಯಲಿದೆ. ಮೂರು ದಿನಗಳ ಈ ಮೇಳದಲ್ಲಿ ವೈಮಾನಿಕ ಉದ್ಯಮದ ಬೆಳವಣಿಗೆ ಕುರಿತ ಗೋಷ್ಠಿಗಳು, ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News