ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಉಪಗ್ರಹ ಕೇಂದ್ರಕ್ಕೆ ಚಾಲನೆ

Update: 2020-01-18 17:42 GMT

ಬೆಂಗಳೂರು, ಜ.18: ರಾಜ್ಯ ಪಂಚಾಯತ್ ರಿಸೋರ್ಸ್ ಸೆಂಟರ್ ಆವರಣದಲ್ಲಿರುವ ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಂಸ್ಥೆಯ ಉಪಗ್ರಹ ಕೇಂದ್ರವನ್ನು ಶನಿವಾರ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

ಭಾರತ ಸರಕಾರದ ಬಾಹ್ಯಾಕಾಶ ಇಲಾಖೆ ಹಾಗೂ ಇಸ್ರೋ ಸಂಸ್ಥೆಯ ತಾಂತ್ರಿಕ ಬೆಂಬಲದಿಂದ ಸುಮಾರು 4.27 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ಯಾಟ್‌ಕಾಮ್ ಕೇಂದ್ರವು ಭೂ ಕೇಂದ್ರ ಹಾಗೂ ವಿಸ್ತರಿಸಲ್ಪಟ್ಟ ಜಿಸ್ಯಾಟ್ 12 ಸಿ-ಬ್ಯಾಂಡ್ ಪರಿವರ್ತಕವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಏಕಮುಖ ದೃಶ್ಯ ಮಾಧ್ಯಮ ಮತ್ತು ದ್ವಿಮುಖ ಶ್ರವಣ ಮಾಧ್ಯಮ ಸಂಪರ್ಕವಿರುವ ಸ್ಟುಡಿಯೋವನ್ನು ಒಳಗೊಂಡಿದೆ. ರಾಜ್ಯದ ಎಲ್ಲ ತಾಲೂಕುಗಳ ತಾಲೂಕು ಪಂಚಾಯಿತಿಗಳಲ್ಲಿ ಸ್ವೀಕೃತಿ ಕೇಂದ್ರಗಳನ್ನು ಅಳವಡಿಸಲಾಗಿದೆ. ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಸಂಸ್ಥೆಯು ತನ್ನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಈಶ್ವರಪ್ಪ ಹೇಳಿದರು.

ಸರಕಾರದ ಹಲವು ಇಲಾಖೆಗಳು ಮತ್ತು ಸಂಸ್ಥೆಗಳು ಸಹ ಅವರವರ ತರಬೇತಿ ಕಾರ್ಯಕ್ರಮಗಳನ್ನು ನಡೆಸಲ, ಈ ಸೌಲಭ್ಯವನ್ನು ನಿಗದಿತ ಶುಲ್ಕ ಪಾವತಿಸಿ ಪಡೆಯುತ್ತಿವೆ ಎಂದು ಅವರು ತಿಳಿಸಿದರು.

ಸ್ಯಾಟ್ ಕಾಂ ಸಬ್ ಸ್ಟುಡಿಯೋ: ಸಂಸ್ಥೆಯು 2013ರ ಜೂ.24ರಂದು ಸರಕಾರದ ಸಹಯೋಗದೊಂದಿಜಗೆ ಐದು ಸ್ಯಾಟ್‌ಕಾಂ ಉಪ ಕೇಂದ್ರಗಳನ್ನು ವಿಶ್ವಬ್ಯಾಂಕ್ ನೆರವಿನ ಗ್ರಾಮ ಸ್ವರಾಜ್ ಯೋಜನೆಯಡಿಯಲ್ಲಿ ಬೆಂಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ ಮತ್ತು ಮಂಗಳೂರಿನಲ್ಲಿ ಸ್ಥಾಪಿಸಲಾಗಿದೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

ಉಪಗ್ರಹ ಕೇಂದ್ರಗಳನ್ನು ಪ್ರಾರಂಭಿಸಿದಾಗಿನಿಂದ ಯಾವುದೇ ಆಚರಣೆಯಿಲ್ಲದೆ ತರಬೇತಿ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲ 176 ತಾಲೂಕು ಕೇಂದ್ರಗಳಲ್ಲಿ ಆಯೋಜಿಸಲಾಗುತ್ತಿದೆ. ಈ ಸೌಲಭ್ಯದಿಂದ ಅತೀ ಶೀಘ್ರದಲ್ಲಿ ಹೆಚ್ಚಿನ ಸಂಖ್ಯೆಯ ಶಿಬಿರಾರ್ಥಿಗಳಿಗೆ ಮಾಹಿತಿಯನ್ನು ತಲುಪಿಸಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು.

ಸ್ಥಳೀಯ ಸಮಸ್ಯೆಗಳಿಗೆ ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ವಿಷಯ ತಜ್ಞರೊಂದಿಗೆ ನೇರವಾಗಿ ಸಂವಹನ ನಡೆಸಿ ಆ ಮೂಲಕ ಶಕ್ತಿ ಕೇಂದ್ರದಿಂದ ಕಟ್ಟಕಡೆಯ ಪಂಚಾಯಿತಿಯವರೆಗೆ ತಲುಪುವ ನಿಟ್ಟಿನಲ್ಲಿ ಈ ತಾಂತ್ರಿಕತೆಯು ವೈಶಿಷ್ಟತೆಯನ್ನು ಹೊಂದಿ ದೇಶಕ್ಕೆ ಮಾದರಿಯಾಗಿರುತ್ತದೆ ಎಂದು ಈಶ್ವರಪ್ಪ ತಿಳಿಸಿದರು.

2018-19ನೇ ಸಾಲಿನಲ್ಲಿ ರಾಷ್ಟ್ರದಲ್ಲಿಯೇ ಅತೀ ಹೆಚ್ಚಿನ ಶಿಬಿರಾರ್ಥಿಗಳಿಗೆ ತರಬೇತಿ ನೀಡಿರುವುದಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ನೀಡಿ ಗೌರವಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ‘ಸಬ್ ಕೀ ಯೋಜನಾ ಸಬ್ ಕಾ ವಿಕಾಸ್’ ಅಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ರಾಜ್ಯವು ಹೆಚ್ಚಿನ ಸಾಧನೆಯನ್ನು ಮಾಡಿದ್ದು ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಎ.ಅತೀಖ್, ಉಮಾ ಮಹಾದೇವನ್, ಎಸ್‌ಎಆರ್‌ಡಿ ನಿರ್ದೇಶಕ ಶೀಲಾನಾಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News