ಬಯಲ ಕನ್ನಡಿಯಲ್ಲಿ ಮೂಡಿದ ಪುಸ್ತಕ ಬಿಂಬಗಳು

Update: 2020-01-19 04:51 GMT

ತಮ್ಮ ಪ್ರಭಾವೀ ಕವಿತೆಗಳ ಮೂಲಕ ಓದುಗನನ್ನು ಕಟ್ಟಿಹಾಕುವ ಕವಿ ನಾಗೇಶ್ ಜೆ. ನಾಯಕ್ ಅವರು ವೃತ್ತಿಯಲ್ಲಿ ಶಿಕ್ಷಕರು. ಬಿಡುವಿನ ವೇಳೆಯನ್ನು ಸಾಹಿತ್ಯ ಕೃಷಿಗಾಗಿ ಮೀಸಲಿಟ್ಟವರು. ಬರಹದ ಎಲ್ಲಾ ಪ್ರಕಾರಗಳಲ್ಲೂ ತೊಡಗಿಸಿಕೊಂಡಿರುವ ಇವರಿಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಶಸ್ತಿಗಳು ಒಲಿದು ಬಂದಿವೆ. ಹೆಚ್ಚಾಗಿ ಯಾವ ಸಾಹಿತಿಯೂ ಅಷ್ಟಾಗಿ ತೊಡಗಿಸಿಕೊಳ್ಳದ ವಿಮರ್ಶೆ ಎಂಬ ಪ್ರಕಾರದಲ್ಲೂ ಸೈ ಎನಿಸಿಕೊಂಡಿರುವ ನಾಗೇಶ್ ನಾಯಕ್ ಅವರು ನಾಡಿನ ಸಾಹಿತಿಗಳ ಕೃತಿಗಳನ್ನು ವಿವಿಧ ಪತ್ರಿಕೆಯಲ್ಲಿ ಪರಿಚಯಿಸುತ್ತಾ ಬಂದಿದ್ದಾರೆ. ಇಂತಹ ಐವತ್ತು ವಿಮರ್ಶಾ ಲೇಖನಗಳನ್ನು ಈಗ ಬಯಲ ಕನ್ನಡಿ ಎಂಬ ಹೆಸರಲ್ಲಿ ನಮ್ಮ ಮುಂದಿಟ್ಟಿದ್ದಾರೆ. ಬರವಣಿಗೆಗಿಂತಲೂ ಸವಾಲಿನ ಕೆಲಸ ಬರಹಕ್ಕೆ ಆಕರ್ಷಕವಾದೊಂದು ಶೀರ್ಷಿಕೆ ಕೊಡುವುದು. ಪುಸ್ತಕವೊಂದಕ್ಕೆ ಶೀರ್ಷಿಕೆ ಕೊಡುವುದು ಅದಕ್ಕಿಂತ ಕಠಿಣ. ನಾಗೇಶ್ ನಾಯಕರು ತನ್ನ ಮಿತ್ರ ಹಾಗೂ ಈ ಪುಸ್ತಕದ ಮುನ್ನುಡಿಗಾರರಾದ ಅಲ್ಲಾಗಿರಿರಾಜ್ ಕನಕಗಿರಿ ಅವರ ಸಲಹೆಯಂತೆ ಈ ವಿಮರ್ಶಾ ಸಂಕಲನಕ್ಕೆ ಬಯಲ ಕನ್ನಡಿ ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಶೀರ್ಷಿಕೆ ಪುಸ್ತಕಕ್ಕೆ ಅತ್ಯಂತ ಚೆನ್ನಾಗಿ ಹೊಂದುತ್ತದೆ. ಬಯಲಲ್ಲಿಟ್ಟ ಕನ್ನಡಿಯಲ್ಲಿ ಆ ದಾರಿಯಲ್ಲಿ ಹಾದುಹೋಗುವವರೆಲ್ಲರ ಪ್ರತಿಬಿಂಬ ಮೂಡುತ್ತದೆ. ಪುಸ್ತಕ ಪ್ರಕಟನೆಯ ಹಾದಿಯಲ್ಲಿ ಸಾಗುವ ಲೇಖಕರೆಲ್ಲರೂ ಈ ಬಯಲ ಕನ್ನಡಿಯಲ್ಲಿ ಮುಖ ನೋಡಿಯೇ ಮುಂದೆ ಸಾಗುತ್ತಿದ್ದಾರೆ. ಕನ್ನಡಿ ನಮ್ಮ ಮುಖಗಳನ್ನು ಪ್ರತಿಬಿಂಬಿಸುವಂತೆ ಈ ಬಯಲ ಕನ್ನಡಿ ವಿವಿಧ ಲೇಖಕರ ಕೃತಿಗಳ ಹೊರ, ಒಳ ಮುಖಗಳನ್ನು ತನ್ನಲ್ಲಿ ಬಿಂಬಿಸಿದೆ. ಬಯಲ ಕನ್ನಡಿಗೆ ಅಕ್ಷರದ ಮುನ್ನುಡಿ ಬರೆದಿರುವ ಅಲ್ಲಾಗಿರಿರಾಜ್ ಕನಕಗಿರಿ ಅವರ ಮಾತುಗಳನ್ನು ಗಮನಿಸಿ. ಸಾಹಿತ್ಯದ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಪರಿಚಯಿಸುವ ಮೂಲಕ ಮುಕ್ತವಾಗಿ ವಿಮರ್ಶೆ ಮಾಡುವುದೆಂದರೆ ‘ಮುಖ ನೋಡಿ ಮೊಳ ಹಾಕುವುದಲ್ಲ, ಕನ್ನಡಿ ಮುಂದೆ ಅತ್ತ ಕಣ್ಣೀರಿನಷ್ಟೇ ನಗ್ನ ಸತ್ಯ’ ಎನ್ನುವಂತಹ ನೈಜ ಮತ್ತು ತೂಕಬದ್ಧ ಮೀಮಾಂಸೆ ಓದುಗರ ಮುಂದಿಡುವುದು ವಾಸ್ತವ ಕಾಲಘಟ್ಟದಲ್ಲಿ ತುಂಬಾ ವಿರಳವಾಗಿದೆ. ಇಂತಹ ವಿರಳತೆಯ ನಡುವೆಯೂ ಮರುಭೂಮಿ ನಡುವೆ ಬೊಗಸೆ ನೀರು ಕಂಡಷ್ಟು ಜೀವ ಖುಷಿ ನೀಡುವ ಅಪರೂಪದ ಸಾಹಿತ್ಯ ಕೃಷಿ ವಿಮರ್ಶಕರಲ್ಲಿ ನಮ್ಮ ರಾಜ್ಯದ ಗಡಿಭಾಗದಲ್ಲಿ ಖುದ್ದು ಎದ್ದು ಕಾಣುವ ಹೆಸರೇ ನಾಗೇಶ ನಾಯಕ.

 ವಿಮರ್ಶೆ ಮಾಡುವವರು ಹಿರಿಯರಾಗಿರಬೇಕು, ಎಲ್ಲವನ್ನೂ ಅರೆದು ಕುಡಿದಿರಬೇಕು, ನೂರಾರು ಪುಸ್ತಕಗಳನ್ನು ರಚಿಸಿರಬೇಕು ಎನ್ನುವ ಮಾನದಂಡ ಎಲ್ಲೂ ಇಲ್ಲ. ವಿಮರ್ಶೆ ಮಾಡುವವರಿಗೆ ಒಳ್ಳೆಯ ಮನಸ್ಸು, ಓದುವ ಗುಣ ಇದ್ದರೆ ಸಾಕು. ಆ ಪುಸ್ತಕಕ್ಕೆ ನಿಜವಾದ ನ್ಯಾಯ ಸಿಕ್ಕೇ ಸಿಗುತ್ತದೆ. ಬಯಲ ಕನ್ನಡಿಯಲ್ಲಿ ವಿವಿಧ 50 ಹಿರಿಯ ಹಾಗೂ ಉದಯೋನ್ಮುಖ ಲೇಖಕರ ಗಜಲ್ ಸಂಕಲನ, ಕಥಾ ಸಂಕಲನ, ನಾಟಕ,ಕವನ ಸಂಕಲನ, ಮಕ್ಕಳ ಕಥಾ ಸಂಕಲನ, ಮಕ್ಕಳ ಕವನ ಸಂಕಲನ, ಲಲಿತ ಪ್ರಬಂಧ ಸಂಕಲನ, ಹನಿಗವನ ಸಂಕಲನ, ಜುಗಲ್ ಸಂಕಲನ ಹೀಗೆ ವಿಭಿನ್ನ ಮಾದರಿಯ ಕೃತಿಗಳ ವಿಮರ್ಶೆಯಿದೆ. ಇವರು ಪ್ರತಿಯೊಂದು ಕೃತಿಯಲ್ಲೂ ವಿಶೇಷವೆಂದು ಕಂಡ ಸಾಲುಗಳನ್ನು ಉದ್ಧರಿಸಿ ಅವುಗಳ ವಿವರಣೆ ನೀಡಿ, ಕವಿ/ ಲೇಖಕ ಅಲ್ಲಿ ಹೇಳಬಯಸಿರುವ ವಿಷಯ ನಮಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಮಾಡುತ್ತಾರೆ. ಇವರ ವಿಮರ್ಶೆ ಓದಿದವರಿಗೆ ಆ ಕೃತಿ ಓದಬೇಕೆನ್ನುವ ತುಡಿತ ಉಂಟಾಗದಿರದು. ಕಥಾ ಸಂಕಲನ ಹಾಗೂ ಕವನ ಸಂಕಲನದ ವಿಮರ್ಶೆ ಎರಡೂ ಒಂದಕ್ಕೊಂದು ಭಿನ್ನ. ಆದರೆ ಇವರಿಗೆ ಕತೆ, ಕವನ, ನಾಟಕ, ಗಜಲ್, ಪ್ರಬಂಧ ಹೀಗೆ ಯಾವುದೇ ಪ್ರಕಾರದ ವಿಮರ್ಶೆಯಾಗಲೀ ಕಠಿಣವೆನಿಸಿದಂತಿಲ್ಲ. ಸಲೀಸಾಗಿ, ಉತ್ತಮವಾಗಿ ಎಲ್ಲಾ ಪ್ರಕಾರಗಳನ್ನೂ ಇವರು ವಿಮರ್ಶಿಸುತ್ತಾ ಹೋಗುತ್ತಾರೆ. ಕವನದಲ್ಲಿ ಸೂಜಿಗಲ್ಲಿನಂತೆ ಸೆಳೆಯುವ ತೂಕದ ಸಾಲುಗಳನ್ನು ಎತ್ತಿ ತೋರಿಸಿ ವಿಮರ್ಶೆ ಮಾಡಿದರೆ, ಕತೆಗಳಲ್ಲಿ ವಸ್ತು, ವಿಷಯ, ಶೈಲಿ, ಪಾತ್ರ ಪರಿಚಯ ಇತ್ಯಾದಿಗಳ ಮೂಲಕ ವಿಮರ್ಶೆ ಮಾಡುತ್ತಾರೆ. ಈ ಪುಸ್ತಕದಲ್ಲಿರುವ ಗಜಲ್ ಸಂಕಲನ ಹಾಗೂ ಜುಗಲ್ ಸಂಕಲನಗಳ ವಿಮರ್ಶೆ ಓದುವಾಗ ಅವನ್ನೊಮ್ಮೆ ಓದಲೇ ಬೇಕೆನ್ನುವ ಹಂಬಲ ಓದುಗನಲ್ಲಿ ಮೂಡುತ್ತದೆ. ಈ ರೀತಿ ಓದುಗನಲ್ಲಿ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ವಿಮರ್ಶೆ ಬರೆಯುವುದರಿಂದ ಕೃತಿಕಾರನ ಪುಸ್ತಕಗಳಿಗೆ ಒಂದಷ್ಟು ಹೆಚ್ಚು ಬೇಡಿಕೆ ಬರುವುದು ನಿಸ್ಸಂಶಯ. ಸಾಮಾನ್ಯ ಓದುಗನಿಗೆ ವಿಮರ್ಶೆಯೆಂದರೆ ರುಚಿಸದು. ಅದು ಸಾಹಿತ್ಯದ ಅಧ್ಯಯನ ಮಾಡುವವರಿಗಷ್ಟೇ ಅಗತ್ಯ ಎಂದು ಭಾವಿಸುವ ಜನರಿದ್ದಾರೆ. ವಿಮರ್ಶೆಯೆಂದರೆ ಗಹನವಾದದ್ದು, ಸುಲಭ ಗ್ರಹಿಕೆಗೆ ನಿಲುಕದ್ದು, ನೀರಸವಾದದ್ದು ಎಂಬ ಧೋರಣೆ ಜನರಿಗಿರಬಹುದು. ಆದರೆ ನಾಗೇಶ್ ನಾಯಕರ ವಿಮರ್ಶೆಗಳನ್ನು ಓದಿದವರಿಗೆ ಹಾಗನಿಸದು. ಸ್ವತಃ ಸಾಹಿತಿಯೂ ಕವಿಯೂ ಆದ ಇವರ ಪದ ಬಳಕೆ, ವಾಕ್ಯ ಪ್ರಯೋಗದ ಶೈಲಿ ಅನುಪಮವಾದದ್ದು. ವಿಮರ್ಶೆಯನ್ನು ಆಸಕ್ತಿದಾಯಕ ಲೇಖನವೋ, ಕತೆಯೋ ಎಂಬಂತೆ ಓದುಗ ಒಂದೇ ಗುಕ್ಕಿನಲ್ಲಿ ಓದಿಬಿಡುತ್ತಾನೆ. ಅವರ ಭಾಷಾ ಪ್ರಬುದ್ಧತೆ ಹಾಗೂ ಭಾಷಾ ಸೌಂದರ್ಯಕ್ಕೆ ಈ ವಿಮರ್ಶೆಯ ತುಣುಕುಗಳನ್ನು ಗಮನಿಸಿ.

 ಬಿಸಿಲ ನಾಡಾದ ಹೊಸಪೇಟೆಯ ಕವಯಿತ್ರಿ ಅಂಜಲಿ ಬೆಳಗಲ್ ಬಂದೂಕು ಹಿಡಿದ ಕೈಗಳು ಎಂಬ ಚೊಚ್ಚಲ ಕವನ ಸಂಕಲನ ಪ್ರಕಟಿಸಿದ್ದಾರೆ. ಬದುಕಿನ ಬಡತನದ ಕಾವಲಿಯಲ್ಲಿ ಬೆಂದು ನೊಂದ ಹುಡುಗಿಯೊಬ್ಬಳು ಹಿಡಿದಿಡುವ ನೋವಿನ ಕವಿತೆಗಳು ಸಂಕಲನದುದ್ದಕ್ಕೂ ಪ್ರತಿಬಿಂಬಿತವಾಗಿವೆ. ಸಿದ್ಧರೂಢ ಕಟ್ಟಿಮನಿಯವರ ಕವನ ಸಂಕಲನ ‘ಬಾನು ಭೂಮಿಯ ಹಸ್ತಲಾಘವ’ದ ವಿಮರ್ಶೆಯ ಒಂದು ಭಾಗ ಹೀಗಿದೆ. ಕವಿತೆ ಎಂದರೆ ಭಾವಗಳ ಬುತ್ತಿ, ಕಂಡುದ್ದನ್ನೆಲ್ಲ ಅಕ್ಷರ ದೋಣಿಯ ಮೂಲಕ ಓದುಗನೆದೆಗೆ ತೇಲಿಬಿಡುವ ಮಧುರ ಅನುಭೂತಿ, ಸುತ್ತಮುತ್ತಣ ಬೊಗಸೆ ಬೆಳಕಾಗುವ ಮಿಣುಕು ಹಣತೆ, ನೊಂದ ಎದೆಗಳನ್ನೆಲ್ಲ ತಣ್ಣಗೆ ನೇವರಿಸಿ ಕಣ್ಣ ಹನಿಗಳನ್ನು ಚುಂಬಿಸುವ ದೇವಕನ್ನಿಕೆ, ತನ್ನೊಳಗಿನ ಎಲ್ಲ ಮಿಡಿತಗಳಿಗೆ ದನಿಯಾಗುವ ಅಂತರಾತ್ಮ... ಈ ವರ್ಣನೆಗಳು, ಉಪಮೆ, ರೂಪಕಗಳು ನಿಜಕ್ಕೂ ಅಮೋಘವಾದದ್ದು. ಭಾಷಾ ದೃಷ್ಟಿಯಿಂದ ಅತ್ಯಂತ ಶ್ರೀಮಂತವಾದವು. ಇವರ ಇಂತಹ ಶ್ರೀಮಂತ ಪದಪ್ರಯೋಗಗಳನ್ನು, ಭಾಷೆಯ ಸೊಗಡನ್ನು ತಿಳಿದವರಿಗೆ ವಿಮರ್ಶೆ ಅದು ಹೇಗೆ ಸಪ್ಪೆಯೆನಿಸೀತು! ಬಯಲ ಕನ್ನಡಿಯೆಂಬ ವಿಮರ್ಶಾ ಗ್ರಂಥವನ್ನು, ಅದರಲ್ಲಿರುವ ವಿಭಿನ್ನ ಸಾಹಿತ್ಯ ಪ್ರಕಾರದ 50 ವಿಮರ್ಶೆಗಳನ್ನು ಒಂದೂ ಬಿಡದೇ ಓದೋಣವೆಂದು ಲೇಖಕರಿಗೆ ಅನಿಸಿದರೆ ಅದಕ್ಕೆ ನಾಗೇಶ್ ನಾಯಕರ ಭಾಷಾ ಬಳಕೆಯೇ ಕಾರಣ. ಸಾಹಿತಿಗಳ ಅದರಲ್ಲೂ ಉದಯೋನ್ಮುಖ ಸಾಹಿತಿಗಳ ಕೃತಿಗಳ ಪರಿಚಯವನ್ನು ಇವರು ಪತ್ರಿಕೆಗಳ ಮೂಲಕ ಪ್ರಕಟಿಸುತ್ತಿರುವ ಕಾರಣ, ಆ ಲೇಖಕರ ಕೃತಿಗಳ ಕುರಿತು, ಅವರ ಸಾಹಿತ್ಯ ಕೃಷಿಯ ಕುರಿತು ನಾಡಿನ ಉದ್ದಗಲದ ಓದುಗರೆಲ್ಲರೂ ತಿಳಿದುಕೊಳ್ಳುವಂತಾಗಿದೆ. ಹೊಸಬರ ಪುಸ್ತಕಗಳ ಬೇಡಿಕೆ ಹೆಚ್ಚುವಂತಾಗಿದೆ. ನಾಗೇಶ್ ನಾಯಕರ ವಿಮರ್ಶೆಯ ಮೂಲಕ ಇನ್ನಷ್ಟು ಲೇಖಕರ ಹೊಸ ಕೃತಿಗಳು ಓದುಗರಿಗೆ ಪರಿಚಯಿಸಲ್ಪಡಲಿ. ಆ ಲೇಖಕರಿಗೆ ತನ್ಮೂಲಕ ಒಂದು ಗುರುತಿಸುವಿಕೆ ಸಿಗಲಿ ಎಂದು ಹಾರೈಸುತ್ತೇನೆ. ಪ್ರಬುದ್ಧ ಲೇಖಕರ ಗುಂಪಿಗೆ ಸೇರಿಸಲು ಅರ್ಹರಾದ ನಾಗೇಶ್ ನಾಯಕರ ಸಾಹಿತ್ಯ ಸೇವೆ ಸಶಕ್ತವಾಗಿ ಮುಂದುವರಿಯಲಿ ಎಂದು ಆಶಿಸುತ್ತೇನೆ.

Writer - ಜೆಸ್ಸಿ ಪಿ.ವಿ.

contributor

Editor - ಜೆಸ್ಸಿ ಪಿ.ವಿ.

contributor

Similar News