ಕೆಳ ಸಮುದಾಯದ ಮೇಲಿನ ಮೇಲ್ವರ್ಗದವರ ಮನೋಭಾವ ಇನ್ನೂ ಬದಲಾಗಿಲ್ಲ: ಮೂಡ್ನಾಕೂಡು ಚಿನ್ನಸ್ವಾಮಿ

Update: 2020-01-19 17:30 GMT

ಬೆಂಗಳೂರು, ಜ. 19: ಕಾಲ, ಸಂಸ್ಕೃತಿ ಮತ್ತು ತಂತ್ರಜ್ಞಾನ ಬದಲಾದರೂ ಮೇಲ್ವರ್ಗದವರಿಗೆ ಕೆಳ ಸಮುದಾಯದ ಮೇಲಿನ ಮನೋಭಾವನೆ ಬದಲಾಗಿಲ್ಲ ಎಂದು ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಸಂಸ ಥಿಯೇಟರ್ ಮತ್ತು ಜೋಳಿಗೆ ಪ್ರಕಾಶನದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಂಜು ಕೋಡಿಉಗನೆ ಅವರ ‘ಚಪ್ಪೋಡು’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಾತಿ ಎಂಬುದು ಮುಖವಾಗಿ ಬೆಳೆದುಕೊಳ್ಳುತ್ತಿದೆ. ಅಲ್ಲದೆ, ಜಾತೀಯತೆಯ ಬೇರು ಮತ್ತಷ್ಟು ಗಟ್ಟಿಗೊಳ್ಳುತ್ತಿದೆ. ಅಸ್ಪೃಶ್ಯತೆ ಎಂಬುದು ಈಗಲೂ ಆಗಿಯೇ ಇದೆ. ಅಸ್ಪೃಶ್ಯರು ಹೊಸ ರೀತಿಯಲ್ಲಿ ಇನ್ನೂ ಅಸ್ಪೃಶ್ಯರಾಗಿಯೇ ಉಳಿಯುತ್ತಿದ್ದಾರೆ ಎಂದು ಖೇಧ ವ್ಯಕ್ತಪಡಿಸಿದರು.

ಚಾಮರಾಜನಗರ ಜಿಲ್ಲೆಯ ಭಾಷೆಗೆ ಒಂದು ಭಾವವಿದೆ, ಆ ಭಾವತೆಯಿಂದ ಅಲ್ಲಿನವರು ರಚಿಸುತ್ತಿರುವ ಕೃತಿ, ಮಹಾಕಾವ್ಯಗಳು ಓದುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ದೇಶಕ್ಕೆ ಜನಪದ ಮಹಾಕಾವ್ಯ ನೀಡಿದ್ದು, ಚಾಮರಾಜನಗರ ಜಿಲ್ಲೆ. ಮುಖ್ಯವಾಗಿ ಮಂಟೆಸ್ವಾಮಿ, ಮಲೆ ಮಹದೇಶ್ವರ ಮತ್ತು ಸಿದ್ದಪ್ಪಾಜಿ ಕಾವ್ಯದಲ್ಲಿ ಆ ತನವನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ, ಕವಯತ್ರಿ ಡಾ.ಎಚ್.ಎಲ್.ಪುಷ್ಪಾ, ಸಾಹಿತಿ ಎ.ಎಂ. ನಾಗಮಲ್ಲಪ್ಪ, ನೆಯೋಟ್ ಅಧ್ಯಕ್ಷ ಡಾ.ಎಚ್.ಆರ್.ಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News