ಸೈಬರ್ ಅಪರಾಧ ತಡೆಗೆ ಸೂಕ್ತ ಕಾನೂನಿನ ಅವಶ್ಯಕತೆ ಇದೆ: ಹೈಕೋರ್ಟ್ ನ್ಯಾಯಾಧೀಶೆ ಬಿ.ವಿ.ನಾಗರತ್ನಾ

Update: 2020-01-19 17:46 GMT

ಬೆಂಗಳೂರು, ಜ.19: ಮಾಹಿತಿ ತಂತ್ರಜ್ಞಾನ ಬೆಳೆದಂತೆ ಅನುಕೂಲಗಳೊಂದಿಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವುದರಿಂದ ಇವುಗಳ ಕಡಿವಾಣಕ್ಕೆ ಸೂಕ್ತ ಕಾನೂನಿನ ಅವಶ್ಯಕತೆ ಇದೆ ಎಂದು ಹೈಕೋರ್ಟ್ ನ್ಯಾಯಾಧೀಶೆ ಹಾಗೂ ರಾಜ್ಯ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷೆ ಬಿ.ವಿ.ನಾಗರತ್ನಾ ಹೇಳಿದರು.

ರವಿವಾರ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ‘ವಿದ್ಯುನ್ಮಾನ ಪುರಾವೆಗಳು’ ವಿಷಯ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುವಾಗ ಮತ್ತು ನ್ಯಾಯಾಂಗದಲ್ಲಿ ಅಪರಾಧ ಪ್ರಕರಣಗಳ ಕುರಿತು ಪರಿಶೀಲಿಸುವಾಗ ಬಹುತೇಕ ಪ್ರಕರಣಗಳು ಡಿಜಿಟಲ್ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾಗಿದೆ ಎಂದು ಅವರು ಹೇಳಿದರು.

ಮಾಹಿತಿ ತಂತ್ರಜ್ಞಾನ ಕಾಯ್ದೆ ಜಾರಿಗೆ ಬಂದು ಇಪ್ಪತ್ತು ವರ್ಷ ಕಳೆದಿದ್ದು, ಸೂಕ್ತ ಕಾನೂನಿನ ಅರಿವು ಇಲ್ಲದಿರುವುದರಿಂದ ತಂತ್ರಜ್ಞಾನ ಬೆಳೆದಂತೆ ಸೈಬರ್ ಕ್ರೈಂ, ಡಿಜಿಟಲ್ ಅಪರಾಧಗಳು ಇಮ್ಮಡಿಯಾಗುತ್ತಿದ್ದು, ತಂತ್ರಜ್ಞಾನ ದುರ್ಬಳಕೆ ಕುರಿತು ನಾಗರತ್ನಾ ವಿಷಾದ ವ್ಯಕ್ತಪಡಿಸಿದರು.

ಸೈಬರ್ ಸೆಕ್ಯೂರಿಟಿ ಮತ್ತು ಕಾನೂನು ತರಬೇತುದಾರ ಡಾ.ಅನಂತಪ್ರಭು ಮಾತನಾಡಿ, ಸೈಬರ್ ಸೆಕ್ಯೂರಿಟಿ ಹಾಗೂ ಡಿಜಿಟಲ್ ಹ್ಯಾಕಿಂಗ್ ವಿಷಯದ ಕುರಿತು ಪೊಲೀಸ್ ಅಧಿಕಾರಿಗಳಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.

ನ್ಯಾಯಾಂಗ ಅಕಾಡೆಮಿಯ ಗವರ್ನರ್ ನ್ಯಾ. ಕೆ.ಎನ್.ಫಣೀಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜು, ಜಿಲ್ಲಾ ನ್ಯಾಯಾಧೀಶ ವಿ.ಶ್ರೀಶಾನಂದ, ನ್ಯಾಯಾಂಗ ಅಕಾಡೆಮಿಯ ನಿರ್ದೇಶಕಿ ಪ್ರಭಾವತಿ ಎಂ.ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News