ಮಕ್ಕಳ ಮೇಲೆ ಪೋಷಕರಿಗೆ ಹೆಚ್ಚಿನ ಕಾಳಜಿ ಇರಲಿ: ಮಾಜಿ ಕೇಂದ್ರ ಸಚಿವ ರೆಹ್ಮಾನ್ ಖಾನ್

Update: 2020-01-19 18:05 GMT

ಬೆಂಗಳೂರು, ಜ.19: ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಆದ್ದರಿಂದ ಮಕ್ಕಳ ಮೇಲೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ರೆಹ್ಮಾನ್ ಖಾನ್ ಹೇಳಿದ್ದಾರೆ.

ರವಿವಾರ ಪಿಳ್ಳಣ್ಣ ಗಾರ್ಡನ್‌ನ ಮನಲ್ ಆಂಗ್ಲ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ 27ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಕಡೆಗೆ ಹೆಚ್ಚು ಒತ್ತು ನೀಡಬೇಕು. ಜ್ಞಾನ ಸಂಪಾದಿಸಿದ ವ್ಯಕ್ತಿಗೆ ಸಮಾಜದಲ್ಲಿ ಉತ್ತಮ ಬೆಲೆ ಇರಲಿದೆ. ಇದರೊಂದಿಗೆ ಒಳ್ಳೆಯ ಸಮಾಜವನ್ನು ಕಟ್ಟಿ, ದೇಶ ಸದೃಢಗೊಳಿಸಬೇಕು ಎಂದು ಹೇಳಿದರು.

ಮೊಬೈಲ್‌ನಿಂದ ಮಕ್ಕಳನ್ನು ದೂರವಿರಿಸಲು ಪೋಷಕರು ಮುಂದಾಗಬೇಕು. ಅನಗತ್ಯವಾಗಿ ಇವುಗಳಲ್ಲೆ ಹೆಚ್ಚು ಸಮಯವನ್ನು ಕಳೆಯಲು ಅನುವು ಮಾಡಿಕೊಡಬಾರದು. ಓದಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮಕ್ಕಳಿಗೆ ಒತ್ತಡ ಹೇರುವುದು ಸರಿಯಲ್ಲ. ಬದಲಾಗಿ ಓದಿನೊಂದಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಮನಲ್ ಆಂಗ್ಲ ಪ್ರೌಢ ಶಾಲಾ ಮಂಡಳಿ ಅಧ್ಯಕ್ಷ ನವಾಬ್ ಜಾನ್ ಖುರೇ ಮಾತನಾಡಿ, ಪ್ರಸ್ತುತ ತಮ್ಮ ಶಾಲೆಯಲ್ಲಿ ಎರಡು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬಡ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಲಾಗುತ್ತಿದೆ. 2018-19ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.98ರಷ್ಟು ಫಲಿತಾಂಶ ಬಂದಿದೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಡಾ.ಜವಾದ್ ರಹೀಂ, ಶಾಸಕ ರಿಝ್ವಾನ್ ಆರ್ಶದ್, ಸೂಫಿ ವಲಿಬಾ, ಶಾಲಾ ಮಂಡಳಿ ಕಾರ್ಯದರ್ಶಿ ಸಲೀಂ ಪಾಷಾ ಖುರೇ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News