ಪತ್ನಿಯ ಅಶ್ಲೀಲ ಸಂಭಾಷಣೆಯಿಂದ ಪತಿ ಆತ್ಮಹತ್ಯೆ ಮಾಡಿಕೊಂಡರೆ ಪ್ರಚೋದನೆ ಆಗಲ್ಲ: ಹೈಕೋರ್ಟ್

Update: 2020-01-19 18:29 GMT

ಬೆಂಗಳೂರು, ಜ.19: ಸ್ನೇಹಿತನ ಜತೆ ಪತ್ನಿ ಅಶ್ಲೀಲ ಸಂಭಾಷಣೆ( ಸೆಕ್ಸ್ ಚಾಟ್) ನಡೆಸಿದ್ದನ್ನು ಕಂಡು ಪತಿ ಆತ್ಮಹತ್ಯೆಗೆ ಮಾಡಿಕೊಂಡರು ಅದು ಆತ್ಮಹತ್ಯೆಗೆ ಪ್ರಚೋದಿಸಿದಂತೆ ಆಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ಪತ್ನಿ ಮೇಲಿನ ಪ್ರಕರಣವನ್ನು ರದ್ದುಪಡಿಸಿದೆ.

ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ಹೈಕೋರ್ಟ್ ಪತಿಯ ಸ್ನೇಹಿತನ ಜತೆ ಆಕೆ ನಡೆಸುತ್ತಿರುವ ಅಶ್ಲೀಲ ಸಂಭಾಷಣೆ ವಿಚಾರವನ್ನು ಆತನ ಗಮನಕ್ಕೆ ತಂದು ಪ್ರತಿದಿನ ಮಾನಸಿಕ ಕಿರುಕುಳ ನೀಡುತ್ತಿದ್ದರೆ ಅದನ್ನು ಐಪಿಸಿ ಸೆಕ್ಷನ್ 107ರ ಅನುಸಾರ ಅಪರಾಧ ಕೃತ್ಯವೆಸಗುವ ಉದ್ದೇಶವೆಂದು ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟು ಮಹಿಳೆಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ಪತಿ, ಪತ್ನಿ ಇಂತಹ ವಿಚಾರಗಳನ್ನು ಸಂಗಾತಿಯಿಂದ ಮುಚ್ಚಿಟ್ಟಿರುತ್ತಾರೆ. ಕಾರಣ ಅವರಲ್ಲಿ ತಪ್ಪಿತಸ್ಥ ಮನೋಭಾವ ಇರುತ್ತದೆ. ಈ ಮನೋಭಾವವನ್ನು ಐಪಿಸಿ ಸೆಕ್ಷನ್ 107ರ ಅನುಸಾರ ಅಪರಾಧ ಕೃತ್ಯವೆಸಗುವ ಉದ್ದೇಶ ಎನ್ನಲಾಗದು. ಪತ್ನಿಯ ವಿಚಾರ ತಿಳಿದು ಮುಂದುವರಿಸದಂತೆ ಸಾಕಷ್ಟು ಎಚ್ಚರಿಕೆ ಕೊಟ್ಟ ನಂತರವೂ ಆಕೆ ಧಿಕ್ಕರಿಸಿ ಮತ್ತೆ ಮುಂದುವರಿಸಿದ್ದರೆ, ಅದರಿಂದ ಮನನೊಂದು ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದರೆ ಅದನ್ನು ಅಪರಾಧ ಕೃತ್ಯವೆಸಗುವ ಉದ್ದೇಶವೆಂದು ಪರಿಗಣಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವೆಂದು ದಾಖಲಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News