ಆಸ್ಟ್ರೇಲಿಯ: ಹವಾಮಾನ ಬದಲಾವಣೆಯಿಂದಾಗಿ ಅಳಿವಿನಂಚಿಗೆ ಬಂದಿರುವ ಪ್ಲಾಟಿಪಸ್

Update: 2020-01-20 16:14 GMT

ಸಿಡ್ನಿ (ಆಸ್ಟ್ರೇಲಿಯ), ಜ. 20: ನಿರಂತರ ಕ್ಷಾಮ ಮತ್ತು ಹವಾಮಾನ ಬದಲಾವಣೆಯ ಇತರ ಪರಿಣಾಮಗಳಿಂದಾಗಿ ಆಸ್ಟ್ರೇಲಿಯದ ವಿಶಿಷ್ಟ ಪ್ಲಾಟಿಪಸ್ ಜೀವಿಗಳು ವಿನಾಶದ ಅಂಚಿಗೆ ತಲುಪುತ್ತಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

 ನದಿಯಲ್ಲಿ ವಾಸಿಸುವ ಈ ಜೀವಿಗಳು ಆಸ್ಟ್ರೇಲಿಯದ ಪೂರ್ವ ಕರಾವಳಿಯ ತಮ್ಮ ಪರಂಪರಾಗತ ನೆಲೆಗಳ 40 ಶೇಕಡದಷ್ಟು ಪ್ರದೇಶದಿಂದ ಈಗಾಗಲೇ ಕಣ್ಮರೆಯಾಗಿವೆ. ದೀರ್ಘಕಾಲೀನ ಬರ, ಭೂಮಿ ಸಮತಟ್ಟು, ಮಾಲಿನ್ಯ ಮತ್ತು ಅಣೆಕಟ್ಟು ನಿರ್ಮಾಣವು ಈ ವಿಶಿಷ್ಟ ಜೀವಿಗಳ ವಿನಾಶಕ್ಕೆ ಕಾರಣವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ, ಮುಂದಿನ 50 ವರ್ಷಗಳಲ್ಲಿ ಪ್ಲಾಟಿಪಸ್‌ಗಳ ಸಂಖ್ಯೆಯು ಇನ್ನೂ 47-66 ಶೇಕಡದಷ್ಟು ಕುಸಿಯಲಿದೆ ಎಂದು ಅವರು ಹೇಳುತ್ತಾರೆ. ಹದಗೆಡುತ್ತಿರುವ ಪರಿಸರ ಮಾಲಿನ್ಯವನ್ನು ಗಣನೆಗೆ ತೆಗೆದುಕೊಂಡರೆ, 2070ರ ವೇಳೆಗೆ ಮೊಟ್ಟೆಯಿಡುವ ಸಸ್ತನಿಗಳು 73 ಶೇಕಡದಷ್ಟು ನಶಿಸಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಪ್ಲಾಟಿಪಸ್‌ಗಳು ‘ಬೆದರಿಕೆಗೆ ಒಳಗಾಗಿರುವ’ ಪ್ರಾಣಿ ಎಂಬುದಾಗಿ ಅಂತರ್‌ರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟ ಘೋಷಿಸಿದೆ.

ಅತಿ ಕಡಿಮೆ ಮಳೆಯಿಂದಾಗಿ ನದಿ ವ್ಯವಸ್ಥೆಗೆ ಹಾನಿ

ಹಲವು ವರ್ಷಗಳಿಂದ ಸುರಿಯುತ್ತಿರುವ ಅತಿ ಕಡಿಮೆ ಮಳೆ ಮತ್ತು ಅತಿ ಹೆಚ್ಚು ಉಷ್ಣತೆಯಿಂದಾಗಿ ನದಿ ವ್ಯವಸ್ಥೆಗಳಿಗೆ ಆಗಿರುವ ಹಾನಿಯು ಈ ಪ್ರಾಣಿಗಳ ಭವಿಷ್ಯವನ್ನು ಮಂಕಾಗಿಸಿದೆ ಎಂದು ನ್ಯೂಸೌತ್‌ವೇಲ್ಸ್ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಇಕೋಸಿಸ್ಟಮ್ ಸಯನ್ಸ್‌ನ ವಿಜ್ಞಾನಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News