ಬೆಂಗಳೂರು: ಬಾಂಗ್ಲಾದಿಂದ ಬಂದವರು ಎಂದು ನೂರಾರು ಜೋಪಡಿಗಳನ್ನು ತೆರವುಗೊಳಿಸಿದ ಪೊಲೀಸರು

Update: 2020-01-20 17:13 GMT

ಬೆಂಗಳೂರು, ಜ.20: ಬಾಂಗ್ಲಾ ದೇಶದಿಂದ ವಲಸೆ ನೆಪವೊಡ್ಡಿ, ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿದ್ದ ನೂರಾರು ಜೋಪಡಿಗಳನ್ನು ಪೊಲೀಸರು ದಿಢೀರ್ ತೆರವುಗೊಳಿಸಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳ ಒತ್ತಡದಿಂದಲೇ ಅನಧಿಕೃತ ತೆರವು ಕಾರ್ಯಾಚರಣೆ ನಡೆದಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ರವಿವಾರ ಸಂಜೆ ಏಕಾಏಕಿ ಇಲ್ಲಿನ ಕರಿಯಮ್ಮನ ಅಗ್ರಹಾರ, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ, ಬೆಳ್ಳಂದೂರು, ವರ್ತೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪೊಲೀಸರು ಬಂದೋಬಸ್ತ್‌ನಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ಜೋಪಡಿಗಳನ್ನು ತೆರವುಗೊಳಿಸಿದ ಪರಿಣಾಮ, ಪುಟ್ಟ ಮಕ್ಕಳು ಸೇರಿದಂತೆ ನೂರಾರು ಬಡ ಜನರು ಕೊರೆಯುವ ಚಳಿಯಲ್ಲಿ ಬೀದಿಯಲ್ಲಿಯೇ ರಾತ್ರಿ ಕಳೆದರು.

ಉತ್ತರ ಕರ್ನಾಟಕದ ಬಹುತೇಕ ಜನರು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದಾರೆ. ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕೆಲಸ ಮಾಡುವ ಅವರೆಲ್ಲ ಮಾಲಕರ ಒಪ್ಪಿಗೆ ಪಡೆದು ಖುಲ್ಲಾ ಜಾಗದಲ್ಲಿ ಜೋಪಡಿ ನಿರ್ಮಿಸಿಕೊಂಡು ವಾಸವಿದ್ದರು. ಜೊತೆಗೆ, ಉತ್ತರ ಭಾರತದಿಂದ ಬಂದಿರುವ ಕಾರ್ಮಿಕರೂ ಇಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಹಲವು ಜೋಪಡಿಗಳನ್ನು ಏಕಾಏಕಿ ತೆರವು ಮಾಡುತ್ತಿರುವುದು ಅವರೆಲ್ಲರಿಗೂ ಆಘಾತವನ್ನುಂಟು ಮಾಡಿದೆ ಎಂದು ಹೇಳಲಾಗುತ್ತಿದೆ.

ಬಂಧಿಸಿಲ್ಲ ಏಕೆ?

ನಾವೆಲ್ಲಾ ಬಾಂಗ್ಲಾದೇಶದ ಪ್ರಜೆಗಳು ಎನ್ನುತ್ತಾರೆ. ಇದು ನಿಜವೇ ಆಗಿದ್ದರೆ, ನಮ್ಮನ್ನು ಪೊಲೀಸರು ಬಂಧಿಸಲಿ. ಅದನ್ನು ಬಿಟ್ಟು ಭಾರತೀಯರಾದ ನಮ್ಮೆಲ್ಲರ ಜೋಪಡಿಗಳನ್ನು ತೆರವುಗೊಳಿಸಿ ಬೀದಿಪಾಲು ಮಾಡುವುದು ಸರಿಯಲ್ಲ ಎಂದು ಕಾರ್ಮಿಕರು ಹೇಳಿದರು.

‘ಪತ್ರ ವೈರಲ್’

ಬಿಬಿಎಂಪಿ ಮಾರತ್‌ಹಳ್ಳಿ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರು, ಪೊಲೀಸರಿಗೆ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂತ್ರಿ ಎಸ್ಪಾನ ಅಪಾರ್ಟ್‌ಮೆಂಟ್‌ನ ಪಕ್ಕದಲ್ಲಿ ಬಾಂಗ್ಲಾ ದೇಶದ ನಿವಾಸಿಗಳು ನಿರ್ಮಿಸಿರುವ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸುತ್ತಿದ್ದು, ರಕ್ಷಣೆ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News