ರಸ್ತೆ ಗುಂಡಿ ಅಪಘಾತ ಪರಿಹಾರ: ಆದೇಶ ಪಾಲನೆ ಮಾಡದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2020-01-20 17:43 GMT

ಬೆಂಗಳೂರು, ಜ.20: ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳಿಂದ ಗಾಯಗೊಳ್ಳುವವರಿಗೆ ಪರಿಹಾರ ನೀಡುವ ಸಂಬಂಧ ಹೈಕೋರ್ಟ್ ಆದೇಶ ಪಾಲನೆ ಮಾಡುವ ಬದಲು ಮೇಯರ್ ಹಾಗೂ ಉಪ ಮೇಯರ್ ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ಸರ್ವಾನುಮತದ ನಿರ್ಣಯ ಕೈಗೊಂಡ ಬಿಬಿಎಂಪಿ ಆಯುಕ್ತರ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ನಗರದಲ್ಲಿ ರಸ್ತೆ ಗುಂಡಿಗಳ ವಿಚಾರವಾಗಿ ವಿಜಯನ್ ಮೆನನ್ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಾಲಯವು ಆದೇಶ ಮಾಡಿರುವುದು ಪಾಲನೆ ಮಾಡಲು. ಅದನ್ನು ಬಿಟ್ಟು ಕೋರ್ಟ್ ಆದೇಶ ಪಾಲಿಸಬೇಕೋ, ಬೇಡವೋ ಎಂದು ರಾಜಕಾರಣಿಗಳು ಸಭೆ ಸೇರಿ ನಿರ್ಧರಿಸಲು ಅಲ್ಲ. ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಹೀಗೆ ಮಾಡುತ್ತಾರೆ ಎಂದರೆ ಏನರ್ಥ? ಕೋರ್ಟ್ ಆದೇಶಗಳಿಗೆ ಗೌರವ ಹಾಗೂ ಘನತೆ ಇದೆ. ಕೋರ್ಟ್ ಆದೇಶದ ಬಗ್ಗೆ ಚರ್ಚಿಸಲು ಸಭೆಯಲ್ಲಿ ಪಾಲ್ಗೊಂಡವರ ಹೆಸರು ಮತ್ತು ವಿಳಾಸವನ್ನು ಜ.30ರೊಳಗೆ ನ್ಯಾಯಾಲಯಕ್ಕೆ ವರದಿ ನೀಡಬೇಕೆಂದು ಬಿಬಿಎಂಪಿಗೆ ಸೂಚಿಸಿತು.

ನಂತರ ಅವರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡುವುದನ್ನು ಪರಿಗಣಿಸಲಾಗುವುದು ಎಂದು ನ್ಯಾಯಪೀಠವು ತಿಳಿಸಿತು. ನಗರದ 108 ರಸ್ತೆಗಳಲ್ಲಿ ನೂರಾರು ಕಿಲೋ ಮೀಟರ್ ರಸ್ತೆ ಗುಂಡಿ ತುಂಬಿದ್ದು, ಅದನ್ನ ಸರಿಪಡಿಸಲಾಗವುದು ಎಂದು ಹಿಂದೆ ಪ್ರಮಾಣ ಪತ್ರ ಸಲ್ಲಿಸಲಾಗಿತ್ತು. ಆದರೆ, ಎಷ್ಟು ರಸ್ತೆ ಗುಂಡಿಗಳನ್ನು ಭರ್ತಿ ಮಾಡಲಾಗಿದೆ ಎಂದು ಸಮರ್ಪಕ ವಿವರ ನೀಡಿಲ್ಲ. ಹೀಗಾಗಿ, ಮುಂದಿನ ವಿಚಾರಣೆ ವೇಳೆ ಸಮರ್ಪಕ ವಿವರಗಳೊಂದಿಗೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಬಿಬಿಎಂಪಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News