ಸೇವೆಗೆ ಇನ್ನೊಂದು ಹೆಸರು ಜಲಮಂಡಳಿ: ಸಚಿವ ವಿ.ಸೋಮಣ್ಣ

Update: 2020-01-20 17:58 GMT

ಬೆಂಗಳೂರು, ಜ.20: ಜನಸಾಮನ್ಯರ ಬೇಡಿಕೆ, ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಏಕೈಕೆ ಸಂಸ್ಥೆ ಜಲಮಂಡಳಿ. ಸೇವೆಗೆ ಇನ್ನೊಂದು ಹೆಸರು ಬೆಂಗಳೂರು ಜಲಮಂಡಳಿ ಎಂದು ವಸತಿ ಹಾಗೂ ತೋಟಗಾರಿಕೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಸೋಮವಾರ ಕಾವೇರಿ ಭವನದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘದಿಂದ ಆಯೋಜಿಸಿದ್ದ 2020ನೇ ಸಾಲಿನ ದಿನಚರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೆಂಗಳೂರು ಜಲಮಂಡಳಿ ಖಾಸಗೀಕರಣವಾಗಿದ್ದರೆ ತುಂಬಾ ತೊಂದರೆ ಆಗುತಿತ್ತು, ಇಂತಹ ಇಲಾಖೆಗಳು ಖಾಸಗೀಕರಣ ಆಗುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆ ಉಂಟಾಗಲಿದೆ. ಬೆಂಗಳೂರು ಜಲಮಂಡಳಿಯನ್ನು ಖಾಸಗೀಕರಣ ಮಾಡಲು ಬಿಜೆಪಿ ಸರಕಾರ ಬಿಡುವುದಿಲ್ಲ ಎಂದರು.

ಇಡೀ ದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿರುವುದು ನಗರದಲ್ಲಿ. 3200 ಅಡಿ ಏತ್ತರಕ್ಕೆ ನೀರು ತಂದು ಹಂಚಿಕೆ ಮಾಡುತ್ತಿರುವುದು ಸಾಮಾನ್ಯದ ಕೆಲಸವಲ್ಲ. ಈ ಕೆಲಸವನ್ನು ಜಲಮಂಡಳಿ ನೌಕರರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ ಅವರು, ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ತರಬೇಕು ಎನ್ನುವ ನಿಟ್ಟಿನಲ್ಲಿ ಜಲಮಂಡಲಿಯಲ್ಲಿ ಹಲವಾರು ನೂತನ ಪ್ರಯೋಗವನ್ನು ಹಿಂದೆ ಸಚಿವನಾಗಿದ್ದಾಗ ಮಾಡಿದ್ದೆ, ಅದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.

ಜಲಮಂಡಳಿ ತಾಂತ್ರಿಕ ಸಮಿತಿ ಸದಸ್ಯ ಕೆ.ಆರ್.ನಾರಾಯಣ ಐಯ್ಯಂಗಾರ್ ಮಾತನಾಡಿ, ಮಂಡಳಿಯ ನೌಕರರು ಸದಾ ಸವಾಲುಗಳ ಬಗ್ಗೆ ಚಿಂತಿಸುತ್ತಾ ಚಾಲ್ತಿಯಲ್ಲಿರುವ ಹಾಗೂ ಮುಂಬರುವ ವರ್ಷಗಳಿಗೆ ಹಲವಾರು ಯೋಜನೆ ಹಾಗೂ ಗುರಿಗಳನ್ನು ರೂಪಿಸಿಕೊಂಡು ಅವುಗಳ ಸಾಕಾರದತ್ತ ಗಮನ ಹರಿಸಬೇಕು, ಆಗ ಮಂಡಳಿಯ ಆದಾಯವು ಹೆಚ್ಚಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಳಿ ಪ್ರಧಾನ ಮುಖ್ಯ ಇಂಜಿನಿಯರ್ ಕೆಂಪರಾಮಯ್ಯ, ಆರ್ಥಿಕ ಸಲಹೆಗಾರ ಪ್ರಶಾಂತ್, ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ, ಎ. ಗೋವಿಂದರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News