2015ರ ಪ್ರೊಬೆಷನರಿ ಪರೀಕ್ಷೆಯಲ್ಲಿ ಅಕ್ರಮ ಆರೋಪ: ಸಿಐಡಿ ತನಿಖೆಗೆ ಒತ್ತಾಯ

Update: 2020-01-20 18:08 GMT

ಬೆಂಗಳೂರು, ಜ.20: ಗೆಜೆಟೆಡ್ ಪ್ರೊಬೆಷನರಿ-2015ರ ಕೆಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಹಾಗೂ ಮೌಲ್ಯಮಾಪನದಲ್ಲಿ ನಡೆದಿರುವ ಅಕ್ರಮವನ್ನು ರಾಜ್ಯ ಸರಕಾರ ನ್ಯಾಯಾಂಗ ಹಾಗೂ ಸಿಐಡಿ ತನಿಖೆಗೆ ವಹಿಸಬೇಕು ಎಂದು ಕೆಎಎಸ್ ನೊಂದ ಅಭ್ಯರ್ಥಿಗಳ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.

ಸೋಮವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು, ಕೆಪಿಎಸ್‌ಸಿ ನಡೆಸಿದ್ದ 1998ರ ನಂತರದ ಎಲ್ಲ ಸಾಲಿನ ಕೆಎಎಸ್ ಪರೀಕ್ಷೆಯಲ್ಲಿ ಕೆಲ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ನಿಗದಿ, ಮೌಲ್ಯಮಾಪನದಲ್ಲಿ ವ್ಯತ್ಯಾಸ ಹಾಗೂ ಇನ್ನಿತರ ಅಕ್ರಮಗಳು ಜರುಗಿದೆ. ಈ ಅಕ್ರಮವನ್ನು ರಾಜ್ಯ ಸರಕಾರ ನ್ಯಾಯಾಂಗ ಹಾಗೂ ಸಿಐಡಿ ತನಿಖೆಗೆ ವಹಿಸಿ, ಇದರಲ್ಲಿ ನಡೆಸಿರುವ ಅಕ್ರಮ ಹಾಗೂ ಅವ್ಯವಹಾರಗಳನ್ನು ಬಯಲಿಗೆಳೆದು ನೊಂದ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

2018ರ ಗೆಜೆಟೆಡ್ ಪ್ರೊಬೆಷನರ್ಸ್‌ ಹುದ್ದೆಗಳಿಗೆ ಮೇ 2017ರಲ್ಲಿ ಅಧಿಸೂಚನೆ ಹೊರಡಿಸಿತ್ತು. 3 ತಿಂಗಳ ನಂತರ ಪೂರ್ವಭಾವಿ ಪರೀಕ್ಷೆ ನಡೆಸಿ, 2017ರ ಡಿಸೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಸಿತು. ಆದರೆ, ಸಂದರ್ಶನವನ್ನು ಸರಿಯಾಗಿ ನಡೆಸಲಿಲ್ಲ. ಮುಖ್ಯ ಪರೀಕ್ಷೆ ನಡೆದ 2 ವರ್ಷದ ನಂತರ ತಾತ್ಕಾಲಿಕ ಅಂಕ ಪಟ್ಟಿ ಪ್ರಕಟಿಸಲಾಯಿತು. ಪ್ರಕಟಣೆಯ ನಂತರ ಆಕ್ಷೇಪಣಾ ಸಲ್ಲಿಕೆಗೆ 15 ದಿನ ಸಮಯಾವಕಾಶ ನೀಡದೆ ಕೇವಲ 7 ದಿನಗಳ ಸಮಯಾವಕಾಶ ನೀಡಿ ಕೆಪಿಎಸ್‌ಸಿ ನಿಯಮಾವಳಿಯನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.

ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಯ ಅಂಕ ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಇ-ಮೇಲ್ ಮೂಲಕ ಕಳುಹಿಸಲಾಗಿದೆ. ಇದರಲ್ಲಿ ಯಾವುದೇ ಸೆಕ್ಯೂರಿಟಿಯೂ ಇಲ್ಲದ ಪಠ್ಯಕ್ರಮದಲ್ಲಿದ್ದು, ಅಂಕಪಟ್ಟಿಯಲ್ಲಿ ಯಾವುದೇ ಅಧಿಕಾರಿಗಳ ಸಹಿ ಇರುವುದಿಲ್ಲ. ಹಾಗೂ ಆಯೋಗದ ಲಾಂಛನವೂ ಸಹ ಮುದ್ರಿಸಿರುವುದಿಲ್ಲ. ಅಲ್ಲದೇ ಹಲವಾರು ಅಭ್ಯರ್ಥಿಗಳ ಅಂಕಪಟ್ಟಿಯನ್ನು ಇ-ಮೇಲ್ ಮಾಡಿಲ್ಲ. ಅಂಕಪಟ್ಟಿ ಒದಗಿಸಲು ಹಲವಾರು ಬಾರಿ ಪತ್ರ ವ್ಯವಹಾರ ನಡೆಸಿದರೂ ಸಹ ಆಯೋಗವು ದಿವ್ಯ ಮೌನಕ್ಕೆ ಶರಣಾಗಿದೆ ಎಂದು ದೂರಿದರು.

ಮೌಲ್ಯಮಾಪನ ಕೊಠಡಿಗೆ ಪ್ರವೇಶ ನಿರ್ಬಂಧವಿದ್ದರೂ ಸಹ ಕೆಲ ಕೆಪಿಎಸ್‌ಸಿ ಸದಸ್ಯರು ಕೊಠಡಿ ಪ್ರವೇಶಿಸಿದ್ದಾರೆ. ಪ್ರಸ್ತುತ ತಾತ್ಕಾಲಿಕ ಪಟ್ಟಿಗೆ 268ಕ್ಕೂ ಹೆಚ್ಚು ಆಕ್ಷೇಪಣೆ ಸಲ್ಲಿಸಿದ್ದರೂ ಸಹ, ಆಯೋಗವು ಯಾವುದೇ ಆಕ್ಷೇಪಣೆಯನ್ನು ಪರಿಗಣಿಸದೇ 2020ರ ಜ.10ರಂದು ತರಾತುರಿಯಲ್ಲಿ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿದೆ. ಈ ಎಲ್ಲ ಆಧಾರವನ್ನು ರಾಜ್ಯ ಸರಕಾರ ಗಣನೆಗೆ ತೆಗೆದುಕೊಂಡು, ಗೆಜೆಟೆಡ್ ಪ್ರೊಬೆಷನರಿ-2015ರ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ನಡೆಸಿರುವ ಅಕ್ರಮವನ್ನು ನ್ಯಾಯಾಂಗ ಹಾಗೂ ಸಿಐಡಿ ತನಿಖೆಗೆ ವಹಿಸಿ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News