ನಿಷೇಧಿತ ನೋಟು ಬದಲಾವಣೆ ದಂಧೆ: ನಾಲ್ವರ ಬಂಧನ, 1 ಕೋಟಿ ರೂ. ಮೌಲ್ಯದ ನೋಟುಗಳು ಜಪ್ತಿ

Update: 2020-01-21 12:39 GMT

ಬೆಂಗಳೂರು, ಜ.21: ಅಮಾನ್ಯಗೊಂಡಿರುವ 500 ಮತ್ತು 1 ಸಾವಿರ ರೂ. ಮುಖಬೆಲೆ ನೋಟು ಬದಲಾವಣೆ ದಂಧೆ ಆರೋಪ ಸಂಬಂಧ ನಾಲ್ವರನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು 1 ಕೋಟಿ ಮೌಲ್ಯದ ನಿಷೇಧಿತ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

ಕೆಆರ್ ಪುರಂನ ರಾಜೇಂದ್ರ ಪ್ರಸಾದ್(49), ವಿಲ್ಸನ್‌ ಗಾರ್ಡನ್‌ನ ಸುರೇಶ್ ಕುಮಾರ್40), ಆಡುಗೋಡಿಯ ಷಾ-ನವಾಝ್(45), ದೀಪಾಂಜಲಿ ನಗರದ ಸತೀಶ್(40) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲೇಶ್ವರಂನ 18ನೇ ಕ್ರಾಸ್‌ನ ಟಾಟಾ ಇನ್ಸಿಟಿಟ್ಯೂಟ್‌ನಲ್ಲಿ ಟ್ರಾವೆಲ್ಸ್ ಕೆಲಸಕ್ಕಾಗಿ ಹೋಗಿದ್ದಾಗ ನಾಗರಾಜ್ ಎಂಬುವರಿಗೆ ಆರೋಪಿ ರಾಜೇಂದ್ರ ಪರಿಚಯವಾಗಿದ್ದ. ಇಬ್ಬರ ನಡುವೆ ಮಾತುಕತೆ ನಡೆದು ಬಳಿಕ ರಾಜೇಂದ್ರ, ನಿಷೇಧಿತ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡುವ ಬಗ್ಗೆ ನಾಗರಾಜುಗೆ ನಂಬಿಸಿದ್ದಾನೆ. ತನ್ನ ಪರಿಚಯದ ವ್ಯಕ್ತಿಯೊಬ್ಬ ನಿಷೇಧಿತ 500 ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿ ಕೊಡುತ್ತಿದ್ದಾನೆ ಎಂದು ನಂಬಿಸಿ ಡೀಲ್ ಕುದುರಿಸಿದ್ದಾನೆ. 

1 ಕೋಟಿ ಮೌಲ್ಯದ ನಿಷೇಧಿತ ನೋಟುಗಳಿಗೆ 10 ಲಕ್ಷ ಹೊಸ ನೋಟುಗಳನ್ನು ಕೊಟ್ಟು ಖರೀದಿಸಿದರೆ, ನಂತರ ನಿಷೇಧಿತ ನೋಟುಗಳನ್ನು ತನಗೆ ಪರಿಚಯ ಇರುವ ಮತ್ತೊಬ್ಬ ವ್ಯಕ್ತಿಯ ಕಡೆಯಿಂದ 14 ಲಕ್ಷ ರೂ.ಗಳಿಗೆ ಮಾರಾಟ ಮಾಡಿಸುತ್ತೇನೆ. ಆ ವ್ಯಕ್ತಿಯು ಸರಕಾರಿ ಬ್ಯಾಂಕಿನಲ್ಲಿ ಹೊಸ ನೋಟುಗಳಾಗಿ ಬದಲಾಯಿಸಿಕೊಳ್ಳಲಿದ್ದು, ಈ ವ್ಯವಹಾರದಿಂದ 4 ಲಕ್ಷ ಲಾಭ ಬರಲಿದೆ. ಅದರಲ್ಲಿ ಇಬ್ಬರು ತಲಾ 2 ಲಕ್ಷ ತೆಗೆದುಕೊಳ್ಳೋಣ. ಉಳಿದ ಹಣವನ್ನು ಕೊಡುತ್ತೇನೆ ಎಂದು ನಂಬಿಸಿದ್ದ ಎನ್ನಲಾಗಿದೆ.

ಬಳಿಕ, ನಾಗರಾಜು ಹಾಗೂ ಅವರ ಸೋದರ ಸಂಬಂಧಿ ರಾಜಣ್ಣ ಎಂಬವರನ್ನು ಕಾರ್ಪೊರೇಷನ್‌ನ ಯುನಿಟಿ ಬಿಲ್ಡಿಂಗ್ ಬಳಿಗೆ ಆರೋಪಿ ರಾಜೇಂದ್ರ ಕರೆಸಿಕೊಂಡಿದ್ದ. ಅಲ್ಲಿ ಇತರ ಬಂಧಿತ ಆರೋಪಿಗಳಾದ ಸುರೇಶ್, ಷಾ-ನವಾಝ್, ಸತೀಶ್‌ನನ್ನು ಪರಿಚಯಿಸಿ ಇವರೇ ನಿಷೇಧಿತ ನೋಟುಗಳನ್ನು ಕೊಡಲಿದ್ದಾರೆ ಎಂದು ನಂಬಿಸಿ 10 ಲಕ್ಷ ರೂ. ಗಳನ್ನು ಪಡೆದು 1 ಕೋಟಿ ಮೌಲ್ಯದ ನಿಷೇಧಿತ 500 ಹಾಗೂ 1 ಸಾವಿರ ಮುಖ ಬೆಲೆಯ ನೋಟುಗಳನ್ನು ಕೊಡಿಸಿದ್ದ ಎಂದು ತಿಳಿದುಬಂದಿದೆ.

ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News