ಬೆಂಗಳೂರು: ದುಷ್ಕರ್ಮಿಗಳಿಂದ ಕೆಂಗೇರಿ ಚರ್ಚ್ ಮೇಲೆ ದಾಳಿ

Update: 2020-01-21 14:40 GMT

ಬೆಂಗಳೂರು, ಜ.21: ದುಷ್ಕರ್ಮಿಗಳ ತಂಡವೊಂದು ಚರ್ಚ್ ಮೇಲೆ ದಾಳಿ ನಡೆಸಿ, ಕೆಲ ವಸ್ತುಗಳಿಗೆ ಹಾನಿ ಉಂಟು ಮಾಡಿರುವುದಲ್ಲದೆ, ಹುಂಡಿ ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಕೆಂಗೇರಿ ಮುಖ್ಯ ರಸ್ತೆ ಸ್ಯಾಟಲೈಟ್ ಟೌನ್‌ನಲ್ಲಿರುವ ಸಂತ ಫ್ರಾನ್ಸಿಸ್ ಅಸೀಸ್ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಒಳಾಂಗಣದಲ್ಲಿದ್ದ ಗಾಜಿನ ಆವರಣವನ್ನು ಪುಡಿಪುಡಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾರು, ಯಾವಾಗ ಈ ಘಟನೆ ಮಾಡಿದ್ದಾರೆ ಎಂಬುದು ಇನ್ನು ಬೆಳಕಿಗೆ ಬಂದಿಲ್ಲ. ಸೋಮವಾರ ತಡರಾತ್ರಿ ಹಿಂಬಾಗಿಲನ್ನು ಒಡೆದು ಚರ್ಚ್ ಪ್ರವೇಶಿಸಿದ ದುಷ್ಕರ್ಮಿಗಳು ಚರ್ಚ್‌ನಲ್ಲಿದ್ದ ಪೂಜಾ ಸಾಮಗ್ರಿಗಳು, ಗೌಪ್ಯತಾ ನಿವೇದನಾ ಸ್ಥಳ ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ಅದೇ ರೀತಿ, ಕಟ್ಟಡದ ಒಳಗಿನ ಕಿಟಕಿ, ಬಾಗಿಲು, ಆಲಂಕಾರಿಕ ವಸ್ತುಗಳನ್ನು ಸೇರಿದಂತೆ ಬಹುತೇಕ ವಸ್ತುಗಳು ಒಡೆದು ಧ್ವಂಸ ಮಾಡಿ, ಹುಂಡಿಯನ್ನು ಹೊತ್ತು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ಮುಂಜಾನೆ ಕ್ರೈಸ್ತ ಧರ್ಮ ಗುರುಗಳು ಚರ್ಚ್‌ಗೆ ಹೋದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಫಾದರ್ ಸತೀಶ್ ಅವರು ಕೆಂಗೇರಿ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ಸಿಸಿಟಿವಿ ಪರಿಶೀಲನೆ: ಸ್ಥಳಕ್ಕಾಗಮಿಸಿದ ಪೊಲೀಸರು, ಸಿಸಿಟಿವಿ ಪರಿಶೀಲನೆ ನಡೆಸಿ, ಸ್ಥಳೀಯರ ಹೇಳಿಕೆಗಳನ್ನು ದಾಖಲು ಮಾಡಿದರು. ರಾತ್ರಿ ವೇಳೆ, ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆಯೇ ಎನ್ನುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

‘ಖಂಡನೀಯ, ಕ್ರಮ ಕೈಗೊಳ್ಳಿ’

ಕೆಂಗೇರಿ ಮುಖ್ಯ ರಸ್ತೆ ಸ್ಯಾಟಲೈಟ್ ಟೌನ್‌ನಲ್ಲಿರುವ ಸಂತ ಫ್ರಾನ್ಸಿಸ್ ಅಸೀಸ್ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ಖಂಡನೀಯ. ಈ ಸಂಬಂಧ ಪೊಲೀಸರು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ.

-ಡಾ.ಪೀಟರ್ ಮಚಾದೊ, ಬೆಂಗಳೂರಿನ ಆರ್ಚ್ ಬಿಷಪ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News