ಬೆಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ: ಮಕ್ಕಳ ಮೇಲೂ ಎಫ್‌ಐಆರ್ ದಾಖಲಿಸಿದ ಪೊಲೀಸರು

Update: 2020-01-21 14:50 GMT
ಗಂಗೊಂಡನಹಳ್ಳಿಯಲ್ಲಿ ನಡೆದ ಪ್ರತಿಭಟನೆ (ಫೈಲ್ ಚಿತ್ರ)

ಬೆಂಗಳೂರು, ಜ.21: ಸಿಎಎ ವಿರೋಧಿ ಇಲ್ಲಿನ ಗಂಗೊಂಡನಹಳ್ಳಿಯ ಮುಖ್ಯ ರಸ್ತೆಯಲ್ಲಿ ಮಸೀದಿ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸಂಬಂಧ ಇಲ್ಲಿನ ಚಂದ್ರಲೇಔಟ್ ಠಾಣಾ ಪೊಲೀಸರು 48 ಮಂದಿ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.

ಮಸೀದಿ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಮುಹಮ್ಮದ್ ಸೈಫುಲ್ಲಾ, ಹೋರಾಟಗಾರ್ತಿ ಅಮೂಲ್ಯ, ಸಾಮಾಜಿಕ ಹೋರಾಟಗಾರ್ತಿ ನಜ್ಮಾ ಸೇರಿದಂತೆ 48 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 143, 147, 341 ಹಾಗೂ 149 ಅಡಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

'ಇಲ್ಲಿನ ಗಂಗೊಂಡನಹಳ್ಳಿ ಮುಖ್ಯ ರಸ್ತೆಯಲ್ಲಿ ಪ್ರತಿನಿತ್ಯ ವಾಹನ ದಟ್ಟಣೆ ಇರುತ್ತದೆ. ಈ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಆದರೂ, ಕೆಲವರು ಕಾನೂನು ನಿಯಮ ಉಲ್ಲಂಘಿಸಿ ನೂರಾರು ಜನರನ್ನು ರಸ್ತೆಗೆ ತಂದು ಸೋಮವಾರ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಆದ್ದರಿಂದ ಎಫ್‌ಐಆರ್ ದಾಖಲು ಮಾಡಲಾಗಿದೆ' ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಕ್ಕಳ ಮೇಲೂ ಎಫ್‌ಐಆರ್: ಇಲ್ಲಿನ ಗಂಗೊಂಡನಹಳ್ಳಿ ಮುಖ್ಯ ರಸ್ತೆಯಲ್ಲಿ ದಿನಸಿ ಅಂಗಡಿಯನ್ನಿಟ್ಟುಕೊಂಡಿರುವ ಮಾಲಕ ಮತ್ತು ಆತನ ಮೂವರು ಮಕ್ಕಳ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಅದೇ ರೀತಿ, ಗ್ಯಾರೇಜ್ ಮಾಲಕ, ಧ್ವನಿವರ್ಧಕ ಮಾಲಕನ ಮೇಲೂ ಎಫ್‌ಐಆರ್ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.

ಖಂಡನೀಯ

ಯಾವುದೇ ಮಾರಕಾಸ್ತ್ರ, ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ದೇಶದ ಯಾವುದೇ ಮೂಲೆಯಲ್ಲಿ ಪ್ರತಿಭಟನೆ ನಡೆಸಬಹುದು. ಆದರೂ, ಪೊಲೀಸರು ಮೊಕದ್ದಮೆ ದಾಖಲು ಮಾಡಿದ್ದಾರೆ. ಇಂತಹ ಬೆದರಿಕೆಗಳನ್ನು, ಹೋರಾಟಗಾರರನ್ನು ತಡೆಯಲು ಸಾಧ್ಯವಿಲ್ಲ.

-ನಜ್ಮಾ, ಸಾಮಾಜಿಕ ಹೋರಾಟಗಾರ್ತಿ

ಏನಿದು ಪ್ರತಿಭಟನೆ?

ಸಿಎಎ, ಎನ್‌ಆರ್‌ಸಿ ಪ್ರಕ್ರಿಯೆ ವಿರೋಧಿಸಿ ಇಲ್ಲಿನ ಗಂಗೊಂಡನಹಳ್ಳಿಯಲ್ಲಿ ಜ.20ರಂದು ಪ್ರತಿಭಟನೆ ನಡೆಸಲು ಮಸೀದಿ ಜಂಟಿ ಕ್ರಿಯಾ ಸಮಿತಿ ಉದ್ದೇಶಿಸಿತ್ತು. ಇದಕ್ಕಾಗಿ ಅನುಮತಿಯೂ ಸಿಕ್ಕಿತ್ತು. ಏಕಾಏಕಿ ರವಿವಾರ ರಾತ್ರಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆ ನಡೆಸಬಾರದೆಂದು ಆಯೋಜಕರಿಗೆ ಸೂಚಿಸಲಾಗಿತ್ತು. ದಿನಾಂಕ ನಿಶ್ಚಯವಾಗಿ, ಹಲವು ಕಡೆ ಪ್ರಚಾರ ನಡೆಸಿದ್ದ ಕಾರಣ ಸೋಮವಾರ ನೂರಾರು ಜನರು ಸ್ವಯಂಪ್ರೇರಿತವಾಗಿ ರಸ್ತೆಗಿಳಿದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News