ಕಣ್ಣಿನ ಮಚ್ಚೆಗಳು ಕಣ್ಣಿನ ರೋಗಗಳ ಆರಂಭಿಕ ಲಕ್ಷಣಗಳಾಗಿರಬಹುದು

Update: 2020-01-21 16:28 GMT

ಕಣ್ಣಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ನಾವು ಯೋಚಿಸಿದಾಗ ಹೆಚ್ಚಾಗಿ ದೃಷ್ಟಿಯಲ್ಲಿ ಏನಾದರೊಂದು ತೊಂದರೆಯ ಬಗ್ಗೆ ನಾವು ಚಿಂತಿಸುತ್ತೇವೆ. ಕಣ್ಣಿನಲ್ಲಿ ಕಂಡು ಬರುವ ಯಾವುದೇ ಚಿಹ್ನೆಯನ್ನು ನಾವು ಜನ್ಮಜಾತ ಅಥವಾ ಇನ್ನೇನೋ ಎಂದು ಭಾವಿಸಿಕೊಂಡು ಸುಮ್ಮನಿರುತ್ತೇವೆ. ಕಣ್ಣಿನ ಮಚ್ಚೆ ಅಥವಾ ಕಣ್ಣುಪಾಪೆಯಲ್ಲಿ ಚುಕ್ಕಿ ಕಾಣಿಸಿಕೊಳ್ಳುವುದು ಗಂಭೀರ ಕಳವಳದ ವಿಷಯವೂ ಆಗಬಹುದು. ಜನರು ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಶರೀರದಲ್ಲಿ ಗೋಚರವಾಗುವ ಅನಾರೋಗ್ಯದ ಸಂಕೇತಗಳನ್ನು ಕಡೆಗಣಿಸುತ್ತಾರೆ ಮತ್ತು ಇದು ಕಣ್ಣಿನ ಮಚ್ಚೆಗಳಿಗೂ ಅನ್ವಯಿಸುತ್ತದೆ. ಕೆಲವರಲ್ಲಿ ಇಂತಹ ಚುಕ್ಕಿಗಳು ಜನ್ಮಜಾತವಾಗಿರಬಹುದು,ಆದರೆ ಇತರರಲ್ಲಿ ಅವು ಕ್ಯಾನ್ಸರ್‌ ಕಾರಕಗಳೂ ಆಗಿರಬಹುದು.

ಈ ಮಚ್ಚೆಗಳು ಅಥವಾ ಚುಕ್ಕಿಗಳಲ್ಲಿ ಬಾಹ್ಯ ಮತ್ತು ಆಂತರಿಕ ಎಂದು ಎರಡು ವಿಧಗಳಿವೆ. ಇವುಗಳನ್ನು ‘ನೆವಸ್’ ಎಂದು ಕರೆಯಲಾಗುತ್ತದೆ. ನೆವಸ್ ಎಂದರೆ ಕಣ್ಣುಗಳ ಮಚ್ಚೆ ಮತ್ತು ಇದನ್ನು ಕಣ್ಣಿನ ಮೇಲ್ಮೈನಲ್ಲಿ ಕಾಣಿಸಿಕೊಳ್ಳುವ ಕಂಜಕ್ಟಿವಿಲ್ ನೆವಸ್,ಕಣ್ಣಿನ ಗೊಂಬೆಯ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಐರಿಸ್ ನೆವಸ್ ಮತ್ತು ಅಕ್ಷಿಪಟಲದಡಿ ಅಂದರೆ ಕಣ್ಣಿನ ಹಿಂಭಾಗದಲ್ಲಿ ಕಂಡು ಬರುವ ಕೊರಾಯ್ಡಲ್ ನೆವಸ್ ಎಂದು ಮೂರು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ.

ಸಾಮಾನ್ಯವಾಗಿ ಕಣ್ಣಿನ ಮೇಲ್ಮೈನಲ್ಲಿ ಕಾಣಿಸಿಕೊಳ್ಳುವ ಮಚ್ಚೆಗೆ ಪಿಗ್ಮೆಂಟೆಡ್ ಮೆಲಾನೊಸೈಟಿಸ್ ಎಂದು ಕರೆಯಲಾಗುತ್ತದೆ. ವ್ಯಕ್ತಿಯು ಅನುಭವಿಸುತ್ತಿರುವ ಸಮಸ್ಯೆಯನ್ನು ಅವಲಂಬಿಸಿ ಈ ಕೋಶಗಳು ಹರಡಬಹುದು ಅಥವಾ ಹರಡದಿರಬಹುದು.

ಕಣ್ಣಿನ ಮಚ್ಚೆಗಳು ಈಗಲೂ ವೈದ್ಯರ ಪಾಲಿಗೆ ನಿಗೂಢವಾಗಿಯೇ ಉಳಿದಿವೆ. ಈ ಮಚ್ಚೆಗಳುಂಟಾಗಲು ಕಾರಣವಿನ್ನೂ ಗೊತ್ತಾಗಿಲ್ಲ. ಜನರಲ್ಲಿ ಇವು ಜನ್ಮಜಾತವಾಗಿರಬಹುದು ಮತ್ತು ಅವುಗಳ ಪೈಕಿ ಒಂದೆರಡು ನಂತರ ಉಂಟಾಗಿರಬಹುದು, ಹೀಗಾಗಿ ವೈದ್ಯರು ದೃಢನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ. ಈ ವಿವಾದಗಳ ನಡುವೆಯೇ ಇಂತಹ ಮಚ್ಚೆಗಳು ರೂಪುಗೊಳ್ಳಲು ಈ ಕೆಳಗಿನ ಅಂಶಗಳು ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಶರೀರದಲ್ಲಿಯ ಮೆಲಾನಿನ್ ಅಥವಾ ಕಪ್ಪು ವರ್ಣದ್ರವ್ಯ: ಕಪ್ಪು ಚರ್ಮ ಹೊಂದಿರುವ ವ್ಯಕ್ತಿಗಳಿಗಿಂತ ಕಂದು ಅಥವಾ ಬಿಳಿಯ ಬಣ್ಣದವರಲ್ಲಿ ಇಂತಹ ಮಚ್ಚೆಗಳು ಹೆಚ್ಚು ಸಾಮಾನ್ಯವಾಗಿವೆ. ಇವೆರಡೂ ಪ್ರಕರಣಗಳಲ್ಲಿ ಏಕೈಕ ವ್ಯತ್ಯಾಸವೆಂದರೆ ಲಘು ಬಣ್ಣದ ಚರ್ಮವನ್ನು ಹೊಂದಿರುವವರಲ್ಲಿ ಮೆಲಾನಿನ್ ಕಡಿಮೆ ಪ್ರಮಾಣದಲ್ಲಿರುತ್ತದೆ ಮತ್ತು ಇದು ಮಚ್ಚೆಗಳಿಗೆ ಕಾರಣವಾಗಿರಬಹುದು.

ಬಿಸಿಲು: ಸೂರ್ಯನ ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳುವುದು ಕಣ್ಣುಗಳಲ್ಲಿ ಮಚ್ಚೆಗಳು ರೂಪುಗೊಳ್ಳಲು ಕಾರಣವಾಗಿರಬಹುದು,ಏಕೆಂದರೆ ಬಿಸಿಲಿಗೆ ಹೆಚ್ಚು ಸಮಯ ತೆರೆದುಕೊಂಡಿರುವವರಲ್ಲಿ ಇಂತಹ ಮಚ್ಚೆಗಳು ಹೆಚ್ಚಾಗಿ ಕಂಡುಬರುತ್ತವೆ. ಸೂರ್ಯನ ಕಿರಣಗಳ ಸ್ವರೂಪ ರೂಪಾಂತರಗೊಳ್ಳುತ್ತದೆ ಮತ್ತು ಸೂರ್ಯನ ಹಾನಿಕಾರಕ ಕಿರಣಗಳು ಜೀವಕೋಶ ಚಟುವಟಿಕೆಯ ಅನುಪಾತವನ್ನು ಬದಲಿಸಬಲ್ಲವು.

ಕಣ್ಣುಗಳಲ್ಲಿ ಮಚ್ಚೆಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿದೆ,ಏಕೆಂದರೆ ಕಣ್ಣುಗಳು ನಮ್ಮ ಶರೀರದ ಅತ್ಯಂತ ಸೂಕ್ಷ ಅಂಗಗಳಾಗಿವೆ.

ಕಣ್ಣುಗಳಲ್ಲಿ ಮಚ್ಚೆಗಳನ್ನು ತಡೆಯಲು ಕೆಲವು ಟಿಪ್ಸ್

ನಿಮ್ಮ ಕಣ್ಣುಗಳು ಸೂರ್ಯನ ಬಿಸಿಲಿಗೆ ನೇರವಾಗಿ ಒಡ್ಡಿಕೊಳ್ಳುತ್ತಿದ್ದರೆ ಕಪ್ಪು ಕನ್ನಡಕಗಳನ್ನು ಧರಿಸಿ. ಕೈಗಳ ಸ್ವಚ್ಛತೆಯ ಬಗ್ಗೆ ಗಮನವಿರಲಿ,ಏಕೆಂದರೆ ನಾವು ಆಗಾಗ್ಗೆ ಬರಿಗೈನಿಂದ ಕಣ್ಣುಗಳನ್ನು ಮುಟ್ಟಿಕೊಳ್ಳುತ್ತಿರುತ್ತೇವೆ ಮತ್ತು ಅದನ್ನು ಸೂಕ್ಷ್ಮಜೀವಿಗಳಿಂದ ಕಲುಷಿತಗೊಳಿಸುತ್ತೇವೆ. ಹೀಗಾಗಿ ಕಣ್ಣುಗಳನ್ನು ಸ್ಪರ್ಶಿಸುವ ಪ್ರಮೇಯವುಂಟಾದಾಗ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಒಳ್ಳೆಯ ನಿದ್ರೆ ನಮ್ಮ ಶರೀರಕ್ಕೆ ಮಾತ್ರವಲ್ಲ,ಕಣ್ಣುಗಳಿಗೂ ಅಗತ್ಯವಾಗಿದೆ. ನಿಯಮಿತ ಸಮಯದಲ್ಲಿ ಚೆನ್ನಾಗಿ ನಿದ್ರಿಸುವವರು ಕಡಿಮೆ ನಿದ್ರೆ ಮಾಡುವವರಿಗೆ ಹೋಲಿಸಿದರೆ ಹೆಚ್ಚು ಆರೋಗ್ಯಪೂರ್ಣ ಕಣ್ಣುಗಳನ್ನು ಹೊಂದಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News