ಜನಪ್ರತಿನಿಧಿಗಳ ಶಿಫಾರಸು ಪತ್ರ ಆಧರಿಸಿ ನಡೆಯುವ ವರ್ಗಾವಣೆ ಕಾನೂನು ಬಾಹಿರ: ಹೈಕೋರ್ಟ್

Update: 2020-01-21 17:47 GMT

ಬೆಂಗಳೂರು, ಜ.21: ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರುಗಳು ‘ಅಧಿಕಾರಿಗಳ ವರ್ಗಾವಣೆ’ಗೆ ಶಿಫಾರಸು ಪತ್ರಗಳನ್ನು ಆಧರಿಸಿ ನಡೆಯುವ ವರ್ಗಾವಣೆಗಳು ಕಾನೂನು ಬಾಹಿರ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. 

ಬಿಬಿಎಂಪಿ ಹೆಬ್ಬಾಳ ವಲಯದ ಕಾರ್ಯಕಾರಿ ಎಂಜಿನಿಯರ್ ಕೆ.ಎಂ.ವಾಸು ಅವರು ತಮ್ಮ ವರ್ಗಾವಣೆ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಬಿಬಿಎಂಪಿ ಕಾರ್ಯಕಾರಿ ಇಂಜಿನಿಯರ್ ಒಬ್ಬರ ವರ್ಗಾವಣೆಗೆ ಕೇಂದ್ರ ಸಚಿವರೊಬ್ಬರು ಮುಖ್ಯಮಂತ್ರಿಗೆ ಬರೆದ ಪತ್ರ ಹಾಗೂ ಆ ಪತ್ರಕ್ಕೆ ಮುಖ್ಯಮಂತ್ರಿಯವರು ಅನುಮೋದನೆ ನೀಡಿದ ಪ್ರಕರಣವೊಂದರಲ್ಲಿ ಹೈಕೋರ್ಟ್ ಈ ಸ್ಪಷ್ಟನೆ ನೀಡಿದೆ.

ಬಿಬಿಎಂಪಿ ಕಾರ್ಯಕಾರಿ ಇಂಜಿನಿಯರ್ ವರ್ಗಾವಣೆ ಪ್ರಸ್ತಾಪಿಸಿ, ಸಂಬಂಧಪಟ್ಟ ಎಲ್ಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ ಹಾಗೂ ದಂಡ ಹಾಕಲು ಇದು ಯೋಗ್ಯವಾದ ಪ್ರಕರಣ. ಆದರೆ, ಆ ರೀತಿ ನಡೆದುಕೊಳ್ಳಲು ಕೋರ್ಟ್‌ಗೆ ಇಷ್ಟವಿಲ್ಲ. ಹೀಗಾಗಿ, ಸಂಬಂಧಪಟ್ಟವರು ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳಬಾರದು. ಹಾಗೂ ಇಂತಹ ಕಾನೂನುಬಾಹಿರ ವರ್ಗಾವಣೆಗಳು ಮರುಕಳಿಸಬಾರದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಅರ್ಜಿದಾರ ಅಧಿಕಾರಿಯ ವರ್ಗಾವಣೆ ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಆಗಿದೆ ಎನ್ನುವುದು ದಾಖಲೆಗಳಿಂದ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ವರ್ಗಾವಣೆ ಆದೇಶ ಕಾನೂನಿನ ದುರುದ್ದೇಶದಿಂದ ಕೂಡಿದೆ. ವರ್ಗಾವಣೆಗೆ ಶಿಫಾರಸು ಮಾಡಿರುವ ಬಗ್ಗೆ ಕಾನೂನು ಸಮರ್ಥನೆಗಳು ಕೋರ್ಟ್‌ಗೆ ಕಂಡು ಬರುತ್ತಿಲ್ಲ. ರಾಜಕಾರಣಿಗಳ ಆಣತಿಯಂತೆ ನಡೆದುಕೊಂಡು ಕೆಎಂಸಿ ಕಾಯ್ದೆ-1976ರ ಸೆಕ್ಷನ್ 69ರಡಿ ಅಧಿಕಾರ ಚಲಾಯಿಸಿ ಬಿಬಿಎಂಪಿ ಆಯುಕ್ತರು ಹೊರಡಿಸಿರುವ ವರ್ಗಾವಣೆ ಆದೇಶ ದೋಷಪೂರಿತವಾದ್ದದ್ದು ಮತ್ತು ತನ್ನಿಂತಾನೆ ಬಿದ್ದು ಹೋಗುವಂತಹದ್ದಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಏನಿದು ಪ್ರಕರಣ: ಕೆ.ಎಂ ವಾಸು ಅವರನ್ನು 2020ರ ಮಾ.10ರವರೆಗೆ ಬಿಬಿಎಂಪಿ ಹೆಬ್ಬಾಳ ವಲಯದ ಕಾರ್ಯಕಾರಿ ಇಂಜಿನಿಯರ್ ಹುದ್ದೆಗೆ ನಿಯೋಜನೆಗೊಳಿಸಿ 2019ರ ಫೆ.22ರಂದು ಆದೇಶ ಹೊರಡಿಸಲಾಗಿತ್ತು. ಈ ಮಧ್ಯೆ ವಾಸು ಅವರ ಜಾಗಕ್ಕೆ ಸದ್ಯ ಬಿಬಿಎಂಪಿಯಲ್ಲಿ ಎರವಲು ನಿಯೋಜನೆ ಮೇಲೆ ಇರುವ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಇಂಜಿನಿಯರ್ ಜಿ.ಆರ್.ದೇವೇಂದ್ರ ನಾಯಕ್ ಅವರನ್ನು ನಿಯೋಜನೆಗೊಳಿಸುವಂತೆ ಕೇಂದ್ರ ಸಚಿವರೊಬ್ಬರು 2019ರ ಅ.6ಕ್ಕೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಇದಕ್ಕೆ ಅ.17ರಂದು ಮುಖ್ಯಮಂತ್ರಿಯವರು ಅನುಮೋದನೆ ನೀಡಿದ್ದರು. ಅದರಂತೆ, ಅ.24ರಂದು ವರ್ಗಾವಣೆಗೊಳಿಸಿ ಆಯುಕ್ತರು ಆದೇಶ ಹೊರಡಿಸಿದ್ದರು. ಈ ಅವಧಿಪೂರ್ವ ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ಕೋರಿ ವಾಸು ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News