ಮೆಟ್ರೊ ರೈಲು ನಿಲ್ದಾಣ ಎಲ್ಲಿರಬೇಕೆಂದು ನಿರ್ಧರಿಸಲು ಸಾಧ್ಯವಿಲ್ಲ: ಹೈಕೋರ್ಟ್

Update: 2020-01-21 18:33 GMT

ಬೆಂಗಳೂರು, ಜ.21: ನಮ್ಮ ಮೆಟ್ರೊ ಎರಡನೆ ಹಂತದಲ್ಲಿ ಕೈಗೆತ್ತಿಗೊಂಡಿರುವ ಉತ್ತರ-ದಕ್ಷಿಣ ಕಾರಿಡಾರ್‌ನ ರೀಚ್-3ಸಿ ವಿಸ್ತರಣೆಯ(ನಾಗಸಂದ್ರ-ಬೆಂಗಳೂರು ಅಂತರ್‌ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ-ಬಿಐಇಸಿ) ವಿಚಾರದಲ್ಲಿ ಅಂಚೆಪಾಳ್ಯ(ಶ್ರೀಕಂಠಪುರ) ಬಳಿ ಮೆಟ್ರೋ ನಿಲ್ದಾಣ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಪಿಐಎಲ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ಮೆಟ್ರೋ ರೈಲು ನಿಲ್ದಾಣ ಎಲ್ಲಿರಬೇಕೆಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಅಂಚೆಪಾಳ್ಯ(ಶ್ರೀಕಂಠಪುರ) ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ತಮ್ಮ ಮನೆಯ ಬಳಿ ನಿಲ್ದಾಣ ಬರಬೇಕೆಂದು ಜನ ಬಯಸೋದು ಸಹಜ. ಆದರೆ, ಅದನ್ನು ನಿರ್ಧರಿಸುವ ತಾಂತ್ರಿಕ ನೈಪುಣ್ಯತೆ ನ್ಯಾಯಪೀಠಕ್ಕೆ ಇಲ್ಲ. ಹೀಗಾಗಿ, ಮೆಟ್ರೋ ನಿಲ್ದಾಣದ ಬಗ್ಗೆ ಬಿಎಂಆರ್‌ಸಿಎಲ್ ನಿರ್ಧರಿಸಲಿ ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿತು.

ಅರ್ಜಿದಾರರು ಪ್ರೆಸ್ಟೀಜ್ ಜಿಂದಾಲ್ ಸಿಟಿಗೆ ನೆರವಾಗುವ ಉದ್ದೇಶದಿಂದ ಮೆಟ್ರೋ ನಿಲ್ದಾಣವನ್ನು ಜಿಂದಾಲ್ ಬಳಿಯೇ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಂಚೆಪಾಳ್ಯ(ಶ್ರೀಕಂಠಪುರ) ಹಾಗೂ ಸುತ್ತಮುತ್ತಲಿನ ಸಾವಿರಾರು ಜನರು ಮೆಟ್ರೋ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಚೆಪಾಳ್ಯದ ನಿವಾಸಿಗಳು ಮೆಟ್ರೊ ಬೇಕೆಂದರೆ 1 ಕಿ.ಮೀ. ದೂರದ ಬಿಐಇಸಿ ಕಡೆ ಅಥವಾ 1 ಕಿ.ಮೀ. ದೂರದ ಜಿಂದಾಲ್ ನಿಲ್ದಾಣದ ಕಡೆ ನಡೆದುಕೊಂಡು ಹೋಗಬೇಕಾಗುತ್ತದೆ. ನಡೆಯಲು ಸಾಧ್ಯವಾಗದಿದ್ದರೆ ಬಸ್, ದ್ವಿಚಕ್ರ ವಾಹನ ಬಳಸಬೇಕಾಗುತ್ತದೆ.

ಅಂಚೆಪಾಳ್ಯ(ಶ್ರೀಕಂಠಪುರ) ಮತ್ತು ತೋಟದಗುಡ್ಡದಹಳ್ಳಿ ಗ್ರಾಮಸ್ಥರು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಬೆಂಗಳೂರು ನಗರಕ್ಕೆ ಕೆಲಸಕ್ಕಾಗಿ ನಿತ್ಯ ಓಡಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News