ಮಲೆಗಳಲ್ಲಿ ಮದುಮಗಳು ರಂಗರೂಪದಲ್ಲಿ ಯಶಸ್ವಿ ಪ್ರದರ್ಶನ: ನೂರು ಪ್ರದರ್ಶನಗಳತ್ತ ದಾಪುಗಾಲು

Update: 2020-01-21 18:51 GMT

ಬೆಂಗಳೂರು, ಜ.21: ರಾಷ್ಟ್ರೀಯ ನಾಟಕ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ರಂಗ ಪ್ರಯೋಗವು ನಗರದ ಕಲಾಗ್ರಾಮದಲ್ಲಿ ಜ.20ರಿಂದ ಫೆ.29ರವರೆಗೆ ನಡೆಯುತ್ತಿದ್ದು, ನಿನ್ನೆ(ಸೋಮವಾರ) ನಡೆದ ಮೊದಲ ಪ್ರದರ್ಶನ ಯಶಸ್ವಿ ಕಂಡಿದೆ.

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ 75 ನಟರು ರಾತ್ರಿಯಿಡೀ ನಡೆಯುವ ನಾಟಕದಲ್ಲಿ ಪಾತ್ರ ವಹಿಸಲಿದ್ದಾರೆ. 4 ಬೃಹತ್ ರಂಗ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದಲ್ಲಿ ಮಲೆನಾಡಿನ ತದ್ರೂಪು ದರ್ಶನವನ್ನು ಕಾಣಬಹುದಾಗಿದೆ. ಮೈಸೂರಿನಲ್ಲಿ ರಂಗಾಯಣದ ಮೂಲಕ ಮಲೆಗಳಲ್ಲಿ ಮದುಮಗಳು ಕಾದಂಬರಿಯ ರಂಗರೂಪ ಪ್ರದರ್ಶವು ಆರಂಭವಾಗಿ ಬೆಂಗಳೂರಿನ ಕಲಾಗ್ರಾಮದಲ್ಲಿ ಈವರೆಗೂ 85 ಪ್ರದರ್ಶಗಳನ್ನು ಕಂಡಿದೆ. ಮತ್ತೆ ಜ.20ರಿಂದ ಫೆ.29ರವರೆಗೆ 25 ಪ್ರದರ್ಶನ ನಡೆಯುವ ಮೂಲಕ ನೂರು ಪ್ರದರ್ಶನಗಳು ದಾಟಿ ಹೋಗಲಿದೆ.

ಬೃಹತ್ ಕಾದಂಬರಿಯೊಂದು ರಂಗರೂಪದಲ್ಲಿ ನೂರು ಪ್ರದರ್ಶನಗೊಳ್ಳುವುದು ಸುಲಭವಲ್ಲವೆಂದು ನಾಟಕ ನಿರ್ದೇಶಕ ಬಸವಲಿಂಗಯ್ಯ ಅಭಿಪ್ರಾಯಿಸುತ್ತಾರೆ. ರಾಷ್ಟ್ರಕವಿ ಕುವೆಂಪು ರಚಿಸಿದ ಮಲೆಗಳಲ್ಲಿ ಮದುಮಗಳು ಕಾದಂಬರಿ ಕನ್ನಡ ಭಾಷೆಯ ವಿಸ್ಮಯಗಳಲ್ಲಿ ಒಂದು. ಮಲೆನಾಡಿನ ಕತೆಯಾಗಿ, ನಿಸರ್ಗದ ನಿಗೂಢಗಳ ತಾಣವಾದ ಹುಲಿಕಲ್ಲು ಗುಡ್ಡದ ಸುತ್ತಲಿರುವ ಹಳ್ಳಿಗಳ ಜೀವ ಜಾಲದ ಬದುಕಿನ ವಿವರಗಳೇ ಮೂರ್ತಗೊಂಡಿರುವ ಅನನ್ಯ ಕಥನ ಇದಾಗಿದೆ. ಆಧುನಿಕತೆಯ ಪ್ರವೇಶವು ಭಾರತೀಯ ಗ್ರಾಮ ಸಮಾಜದ ಬದುಕಿನಲ್ಲಿ ತಂದ ಸಾಮಾಜಿಕ ತಲ್ಲಣಗಳ ನಿರೂಪಣೆಯೆ ಈ ಬರಹದ ಜೀವಾಳ. ಕಾದಂಬರಿಯಾಗಿ ಓದುಗರ ಮೆಚ್ಚುಗೆ ಪಡೆದ ಮಲೆಗಳಲ್ಲಿ ಮದುಮಗಳು ಈಗ ರಂಗರೂಪದಲ್ಲೂ ಯಶಸ್ವಿಗೊಂಡಿರುವುದು ರಂಗಕ್ಷೇತ್ರದಲ್ಲಿ ಹೊಸ ಬರವಸೆ ಮೂಡಿಸಿದೆ ಎಂದು ನಾಟಕಕಾರ ಕೆ.ವೈ.ನಾರಾಯಣ ಸ್ವಾಮಿ ಅಭಿಪ್ರಾಯಿಸುತ್ತಾರೆ.

ಮಲೆಗಳಲ್ಲಿ ಮದುಮಗಳು ನಾಟಕ ಪ್ರದರ್ಶನವು ಜ.20ರಿಂದ ಫೆ.29ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News