ಪೊಲೀಸರಿಗೆ ಶರಣಾಗಲು ಆದಿತ್ಯ ರಾವ್ ಗೆ ಕಾರಣವಾಯಿತು ಸಿಸಿಟಿವಿ ದೃಶ್ಯ !

Update: 2020-01-22 15:35 GMT

ಬೆಂಗಳೂರು, ಜ.22: ಮಂಗಳೂರಿನಲ್ಲಿ ಸ್ಫೋಟಕ ಪತ್ತೆ ಪ್ರಕರಣ ಸಂಬಂಧ ಸಿಸಿಟಿವಿಯಲ್ಲಿ ಮುಖಚಹರೆ ಪತ್ತೆಯಾಗಿದ್ದ ಕಾರಣದಿಂದಲೇ ಹೆದರಿ ಪ್ರಮುಖ ಆರೋಪಿ ಆದಿತ್ಯ ರಾವ್(36) ಪೊಲೀಸರಿಗೆ ಶರಣಾಗಿದ್ದಾನೆ ಎನ್ನುವ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಬೆಳಗ್ಗೆ 8:30 ಸುಮಾರಿಗೆ ಬೆಂಗಳೂರಿನ ನೃಪತುಂಗ ರಸ್ತೆಯ ರಾಜ್ಯ ಪೊಲೀಸ್ ಮಹಾನಿರ್ದೇಶಕ ಕಚೇರಿಗೆ ಆದಿತ್ಯ ರಾವ್ ತೆರಳಿದ್ದು, ಸ್ಥಳೀಯ ಸಿಬ್ಬಂದಿಗೆ ಮಂಗಳೂರು ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದಾನೆ. ತದನಂತರ, ಆರೋಪಿಯನ್ನು ಹಲಸೂರು ಗೇಟ್ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆದಿತ್ಯ ರಾವ್‌ ನನ್ನು ಪ್ರಾಥಮಿಕ ವಿಚಾರಣೆಗೊಳಪಡಿಸಿದಾಗ, ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ, ನಗರದ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ನೇತೃತ್ವದ ತಂಡ, ಮಧ್ಯಾಹ್ನದ ಹೊತ್ತಿಗೆ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಿದರು.

ಮಂಗಳೂರಿಗೆ ಆರೋಪಿ: ತದನಂತರ ಹೆಚ್ಚಿನ ವಿಚಾರಣೆಗಾಗಿ ಕೃತ್ಯ ನಡೆದ ಸ್ಥಳಕ್ಕೆ ಆರೋಪಿಯನ್ನು ಒಪ್ಪಿಸಬೇಕೆಂದು ಇಲ್ಲಿನ ಆರನೆ ಎಸಿಎಂಎಂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯನ್ನು ಮಂಗಳೂರಿಗೆ ಕರೆದೊಯ್ಯಲು ಒಪ್ಪಿಗೆ ನೀಡಿದರು. ಬುಧವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಆದಿತ್ಯರಾವ್ ಅನ್ನು ಮಂಗಳೂರಿಗೆ ಕರೆದೊಯ್ದಲಾಯಿತು.

ಸಾಕ್ಷ್ಯಕ್ಕೆ ಹೆದರಿದ?: ಆರೋಪಿ ಆದಿತ್ಯರಾವ್, ಮಂಗಳೂರಿನಲ್ಲಿ ಕೃತ್ಯ ನಡೆದ ಬಳಿಕ ಬೆಂಗಳೂರಿನಲ್ಲಿ ತಲೆಮರೆಸಿಕೊಳ್ಳಬಹುದು ಎಂದು ಭಾವಿಸಿದ್ದ. ಆದರೆ, ಸಿಸಿಟಿವಿ ದೃಶ್ಯಾವಳಿಯಲ್ಲಿ ಆತನ ಮುಖ ಚಹರೆ ಸ್ಪಷ್ಟವಾಗಿ ಗೊತ್ತಾಗಿತ್ತು. ಇನ್ನು, ಬೆಂಗಳೂರಿನ ಪೊಲೀಸರಿಗೂ ಈತನ ಹಳೆಯ ಪ್ರಕರಣಗಳ ಬಗ್ಗೆ ಮಾಹಿತಿ ಇತ್ತು. ಇದರಿಂದ ಹೆದರಿತ ಆದಿತ್ಯರಾವ್, ಮುಂಜಾನೆಯೇ ಡಿಜಿ ಕಚೇರಿಗೆ ಹಾಜರಾಗಿ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಹೆಚ್ಚಿದ ವಿಚಾರಣೆ: ಇಲ್ಲಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು, ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ಅಧಿಕಾರಿಗಳ ದಂಡೇ ಹರಿದುಬಂದಿತ್ತು. ಪತ್ರಿಯೊಬ್ಬರು, ಆರೋಪಿಯ ಹಿನ್ನೆಲೆ, ಕೃತ್ಯ ನಡೆಸಲು ಕಾರಣವೇನು ಎನ್ನುವ ಪ್ರಶ್ನೆಗಳು ಕೇಳಿ, ಉತ್ತರಗಳನ್ನು ವಿಡಿಯೊ ರೆಕಾರ್ಡ್ ಮೂಲಕ ದಾಖಲು ಮಾಡಿದರು ಎಂದು ವರದಿಯಾಗಿದೆ.

'ಯೂಟ್ಯೂಬ್' ಗುರು

ಮಂಗಳೂರಿನಲ್ಲಿ ಸ್ಪೋಟಕ ಪತ್ತೆ ಪ್ರಕರಣ ಸಂಬಂಧ ಬಾಂಬ್ ತಯಾರಿಸಲು ಯೂಟ್ಯೂಬ್ ಅನ್ನು ಗುರುವಾಗಿಸಿಕೊಂಡಿದ್ದ ಎನ್ನಲಾಗಿದೆ. ವಿದೇಶದಲ್ಲಿ ತಯಾರಿಸುವ ಸ್ಫೋಟಕ, ಗುಂಡು ಮದ್ದುಗಳ ವಿಡಿಯೊಗಳನ್ನು ಆತ ಸಂಗ್ರಹಿಸಿಟ್ಟಿದ್ದ. ತದನಂತರ, ಅದರಂತೆಯೇ, ಬಾಂಬ್ ಮಾದರಿ ತಯಾರಿಸಲು ಹೋಗಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News