ಭಯ, ಆತಂಕದ ಪರಿಸ್ಥಿತಿಯಲ್ಲಿ ಹೂಡಿಕೆದಾರರಿಗೆ ಯಾವ ಸಂದೇಶ ನೀಡುತ್ತೀರಿ ?

Update: 2020-01-22 16:37 GMT

ಬೆಂಗಳೂರು, ಜ.22: ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಎಕನಾಮಿಕ್ ಫೋರಂನಲ್ಲಿ ಮುಖ್ಯಮಂತ್ರಿ, ಕೈಗಾರಿಕಾ ಸಚಿವರು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಲು ಹೂಡಿಕೆದಾರರನ್ನು ಆಹ್ವಾನಿಸುತ್ತಿದ್ದಾರೆ. ಮತ್ತೊಂದೆಡೆ ಇಲ್ಲಿ ಭಯ, ಆತಂಕದ ಘಟನೆಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹೂಡಿಕೆದಾರರಿಗೆ ಸರಕಾರ ಯಾವ ಸಂದೇಶ ನೀಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬುಧವಾರ ನಗರದಲ್ಲಿರುವ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರು ಆರೋಪಿಸುತ್ತಿರುವಂತೆ ನಾನು ಪೊಲೀಸ್ ಇಲಾಖೆಯನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿಲ್ಲ. ನನ್ನ ಬದ್ಧತೆ ಈ ರಾಜ್ಯದ 6.50 ಕೋಟಿ ಜನರಲ್ಲಿ ಯಾವುದೇ ರೀತಿಯಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿಯಾಗಬಾರದು ಎಂಬುದು ಎಂದರು.

ಮಂಗಳೂರಿನ ವಿಮಾನ ನಿಲ್ದಾಣ ಮುಂದೆ ನಿನ್ನೆ ನಡೆದ ಪ್ರಹಸನವನ್ನು ಅಣಕು ಯಾತ್ರೆ ಎಂದು ಹೇಳಿದ್ದೇನೆ. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲು ಪೊಲೀಸ್ ಇಲಾಖೆ ನಡೆಸಿದ ಪ್ರಯತ್ನದಿಂದ ಹೂಡಿಕೆದಾರರಿಗೆ ಏನು ಸಂದೇಶವನ್ನು ಕೊಡಲು ಸರಕಾರ ಮುಂದಾಗಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ರಾಮನಗರದಲ್ಲಿ ಒಂದು ಆನೆ ಪಟಾಕಿ ಪ್ರಹಸನ ನಡೆಯಿತು. ಅದೇ ರೀತಿ ನಿನ್ನೆ ಮಂಗಳೂರಿನಲ್ಲಿ ಘಟನೆ ನಡೆದಿದೆ. ಅದನ್ನು ಅಣಕು ಪ್ರದರ್ಶನ ಎನ್ನದೇ ಬೇರೆ ಏನೆಂದು ಕರೆಯಬೇಕು. ಆರೋಪಿ ಆದಿತ್ಯ ರಾವ್ ಮಂಗಳೂರಿನಿಂದ ಬೆಂಗಳೂರಿಗೆ ಬಂದು ಪೊಲೀಸ್ ಮಹಾನಿರ್ದೇಶಕರ ಮುಂದೆ ಶರಣಾಗತಿಯಾಗಿರುವುದು ಒಂದು ನಾಟಕದಂತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಆದಿತ್ಯರಾವ್ ಓರ್ವ ಮೆಕಾನಿಕಲ್ ಪದವೀಧರ. ವಿಮಾನ ನಿಲ್ದಾಣದಲ್ಲಿ ಕೆಲಸ ಪಡೆಯಲು ಪ್ರಯತ್ನಿಸಿದ್ದ. ಇವತ್ತು ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ನಮ್ಮ ಪ್ರಮುಖ ಆದ್ಯತೆಗಳಲ್ಲ. ಆರ್ಥಿಕವಾಗಿ ದೇಶ ಕುಸಿಯುತ್ತಿದೆ, ಯುವಕರಿಗೆ ಉದ್ಯೋಗ ಕೊಡುವುದರಲ್ಲಿ ಎಡವಿದ್ದೇವೆ. ಈ ಬಗ್ಗೆ ಪ್ರಧಾನಿ ಗಮನ ಕೊಡಲಿ ಎಂದು ಅವರು ಹೇಳಿದರು.

ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ಮುಸ್ಲಿಮರ ಮೇಲೆ ಆಪಾದನೆ ಮಾಡಲಾಗುತ್ತಿತ್ತು. ಈಗ ಹಿಂದೂ ಸಮಾಜದಲ್ಲಿಯೂ ಇಂತಹ ಚಟುವಟಿಕೆಗಳು ಮಾಡುವವರು ಇದ್ದಾರೆ ಎಂಬುದು ಗೊತ್ತಾಗಿದೆ. ಮಸೀದಿಗಳಲ್ಲಿ ಆಯುಧಗಳನ್ನು ಸಂಗ್ರಹಿಸಿಡುತ್ತಾರೆ ಎಂದು ಹೊನ್ನಾಳಿ ಶಾಸಕ ಹೇಳಿದ್ದಾರೆ. ಬಜರಂಗದಳದವರಿಗೆ ತ್ರಿಶೂಲ ಕೊಟ್ಟು, ಯಾವ ರೀತಿ ತರಬೇತಿ ಕೊಡಿಸಲಾಗಿದೆ ಎಂಬುದು ಗೊತ್ತಿದೆ ಎಂದು ಅವರು ಹೇಳಿದರು.

ನೆಹರು ಮಾಡಿದ ತಪ್ಪನ್ನು ನಾವು ಸರಿಪಡಿಸುತ್ತಿದ್ದೇವೆ ಎಂದು ಅಮಿತ್ ಶಾ ಭಾಷಣ ಮಾಡುತ್ತಾರೆ. ನೆಹರು ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ, ಪ್ರಧಾನಿಯಾದಾಗ ಅಮಿತ್ ಶಾ ಹುಟ್ಟೇ ಇರಲಿಲ್ಲ. ನಕಲಿ ಎನ್‌ಕೌಂಟರ್‌ಗಳನ್ನು ಮಾಡಿಸಿರುವುದು ಅವರ ರಾಜಕೀಯ ಇತಿಹಾಸ ಎಂದು ಕುಮಾರಸ್ವಾಮಿ ಕಿಡಿಗಾರಿದರು.

ಬಾಂಗ್ಲಾದೇಶಿಯರನ್ನು ಹೊರಗೆ ಅಟ್ಟುತ್ತೇವೆ ಎಂದು ಉತ್ತರ ಕರ್ನಾಟಕದ ಬಡವರ ಗುಡಿಸಲುಗಳನ್ನು ಧ್ವಂಸ ಮಾಡಿ, ಈ ಚಳಿಗಾಲದಲ್ಲಿ ಅವರನ್ನು ಸರಕಾರ ಬೀದಿಯಲ್ಲಿ ಮಲಗಿಸಿದೆ. ದೇಶದ ಹೆಸರು, ಸಂಸ್ಕೃತಿಯನ್ನು ನಿರ್ನಾಮ ಮಾಡಲು ಬಿಜೆಪಿಯವರು ಹೊರಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರು ವಿಶ್ವಕ್ಕೆ ಸ್ಪರ್ಧೆ ಕೊಡುವ ನಗರ

ಬಿಜೆಪಿಯವರು ತಮ್ಮ ರಾಜಕೀಯಕ್ಕಾಗಿ ಮಂಗಳೂರು ನಗರವನ್ನು ಯಾಕೆ ಹಾಳು ಮಾಡುತ್ತಿದ್ದಾರೆ. ವಿಶ್ವದ ಭೂಪಟದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಸ್ಪರ್ಧೆ ಕೊಡುವ ಸಾಮರ್ಥ್ಯ ಇರುವ ನಗರ ಮಂಗಳೂರು. ಅಂತಹ ನಗರವನ್ನು ಭಯೋತ್ಪಾದನೆ ಚಟುವಟಿಕೆ, ಕೋಮುವಾದದ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಕೇಂದ್ರ ಎಂಬಂತೆ ಬಿಂಬಿಸಿ, ದಾವೋಸ್‌ನಿಂದ ಮುಖ್ಯಮಂತ್ರಿ ಎಷ್ಟು ಹೂಡಿಕೆದಾರರನ್ನು ಕರೆದುಕೊಂಡು ಬರುತ್ತಾರೆ?

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಕೆಲಸ ಹುಡುಕಿಕೊಂಡು ವಿದೇಶಗಳಿಗೆ ವಲಸೆ ಹೋಗಿರುವವರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೆ ಮೊದಲ ಸ್ಥಾನದಲ್ಲಿದೆ. 17.5 ದಶಲಕ್ಷ ನಾಗರಿಕರು ಬೇರೆ ಬೇರೆ ದೇಶಗಳಿಗೆ ಕೆಲಸ ಹುಡುಕಿಕೊಂಡು ಹೋಗಿ ಬದುಕುತ್ತಿದ್ದಾರೆ. ಮೆಕ್ಸಿಕೋದಿಂದ 11 ದಶಲಕ್ಷ, ಚೀನಾದಿಂದ 10 ದಶಲಕ್ಷ ಜನ ವಲಸೆ ಹೋಗಿದ್ದಾರೆ. ಆಳುವ ಸರಕಾರಗಳು ಅವರಿಗೆ ಉದ್ಯೋಗ ಕೊಡಿಸುವಲ್ಲಿ ವಿಫಲವಾಗಿರುವುದೇ ಇದಕ್ಕೆಲ್ಲ ಕಾರಣ ಎಂದು ಕುಮಾರಸ್ವಾಮಿ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News