ಮಾಜಿ ಕಬಡ್ಡಿ ಆಟಗಾರ್ತಿ ಮೇಲೆ ಹಲ್ಲೆ ಆರೋಪ: ಪ್ರೊ ಕಬಡ್ಡಿಯ ಕೋಚ್ ಸೇರಿ ನಾಲ್ವರ ಬಂಧನ

Update: 2020-01-22 17:11 GMT

ಬೆಂಗಳೂರು, ಜ.22: ಅಂತರ್‌ರಾಷ್ಟ್ರೀಯ ಕಬಡ್ಡಿ ಮಾಜಿ ಆಟಗಾರ್ತಿ ಉಷಾರಾಣಿ ಮೇಲೆ ಹಲ್ಲೆ ಆರೋಪ ಸಂಬಂಧ ನಾಲ್ವರನ್ನು ಇಲ್ಲಿನ ಸಂಪಂಗಿರಾಮನಗರ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಪ್ರೊ ಕಬಡ್ಡಿ ಲೀಗ್‌ನ ಬೆಂಗಾಲ್ ವಾರಿಯರ್ಸ್ ತಂಡದ ಮುಖ್ಯ ತರಬೇತುದಾರ ಬಿ.ಸಿ.ರಮೇಶ್ ಜೊತೆಗೆ ರಾಜ್ಯ ಅಸೋಸಿಯೇಷನ್‌ನ ಕಾರ್ಯದರ್ಶಿ ಮುನಿರಾಜು, ತರಬೇತುದಾರ ನರಸಿಂಹ ಹಾಗೂ ಷಣ್ಮುಗಂ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉಷಾರಾಣಿ ಅವರು ತರಬೇತುದಾರ ಬಿ.ಸಿ.ರಮೇಶ್, ರಾಜ್ಯ ಅಸೋಸಿಯೇಷನ್‌ನ ಕಾರ್ಯದರ್ಶಿ ಮುನಿರಾಜು, ತರಬೇತುದಾರ ನರಸಿಂಹ ಹಾಗೂ ಷಣ್ಮುಗಂ ಎಂಬುವರ ವಿರುದ್ಧ ಮಂಗಳವಾರ ರಾತ್ರಿ ದೂರು ಸಲ್ಲಿಸಿದ್ದರು. ಇದರ ಅನ್ವಯ ತನಿಖೆ ಕೈಗೊಂಡ ಸಂಪಂಗಿರಾಮನಗರ ಪೊಲೀಸರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಿರಿಯರ ಕಬಡ್ಡಿ ಶಿಬಿರಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಅತಿಥಿಯಾಗಿ ಬಂದಿದ್ದರು. ಈ ವಿಚಾರವಾಗಿ ಮಾತನಾಡಲು ಉಷಾರಾಣಿ ಅವರನ್ನು ಮಂಗಳವಾರ ತಮ್ಮ ಕೊಠಡಿಗೆ ರಮೇಶ್ ಕರೆಸಿದ್ದರು. ಈ ವೇಳೆ ರಮೇಶ್ ಮತ್ತು ಉಷಾರಾಣಿ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಕೊಠಡಿಯಲ್ಲಿದ್ದ ರಮೇಶ್, ನರಸಿಂಹ, ಮುನಿರಾಜು, ಷಣ್ಮುಗಂ ಹಲ್ಲೆ ನಡೆಸಿದ್ದಾರೆ ಎಂದು ಉಷಾರಾಣಿ ದೂರು ಸಲ್ಲಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News