ಮೇದೋಜ್ಜೀರಕ ಗ್ರಂಥಿಯ ಆರೋಗ್ಯ ಕಾಯ್ದುಕೊಳ್ಳಲು ಈ ಟಿಪ್ಸ್ ಅನುಸರಿಸಿ

Update: 2020-01-22 17:56 GMT

ಪ್ಯಾಂಕ್ರಿಯಾಸ್ ಅಥವಾ ಮೇದೋಜ್ಜೀರಕ ಗ್ರಂಥಿಯು ನಮ್ಮ ಜೀರ್ಣಾಂಗದ ಅಗತ್ಯ ಭಾಗವಾಗಿದೆ. ಅದು ನಾವು ಸೇವಿಸಿದ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಕೆಲಸವನ್ನು ಮಾಡುತ್ತದೆ. ಮಧುಮೇಹ ನಿಯಂತ್ರಣ ಮತ್ತು ಪಚನ ಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವ ಈ ಗ್ರಂಥಿಯು ಶರೀರದಲ್ಲಿ ಇನ್ಸುಲಿನ್ ಅನ್ನೂ ಉತ್ಪಾದಿಸುತ್ತದೆ. ಮೇದೋಜ್ಜೀರಕ ಗ್ರಂಥಿಯ ಕ್ಷಮತೆ ಕಡಿಮೆಯಾದರೆ ಪಚನ ಕ್ರಿಯೆಯಲ್ಲಿ ಏರುಪೇರಾಗಿ ಟಾಯ್ಲೆಟ್‌ಗೆ ಪದೇ ಪದೇ ಧಾವಿಸುವಂತಾಗುತ್ತದೆ ಮತ್ತು ರಕ್ತದಲ್ಲಿಯ ಸಕ್ಕರೆ ಮಟ್ಟವೂ ಅಸ್ತವ್ಯಸ್ತಗೊಳ್ಳುತ್ತದೆ. ಶರೀರದಲ್ಲಿಯ ಕೊಬ್ಬನ್ನು ವಿಭಜಿಸಲು ಅಗತ್ಯವಾಗಿರುವ ಜೀರ್ಣ ಕಿಣ್ವಗಳ ಉತ್ಪಾದನೆಯಲ್ಲಿ ಮೇದೋಜ್ಜೀರಕ ಗ್ರಂಥಿಯ ಪಾತ್ರವಿರುತ್ತದೆ. ಈ ಗ್ರಂಥಿಯು ತನ್ನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಜಡತ್ವ, ಮಲಬದ್ಧತೆ,ಆಮ್ಲೀಯತೆ ಇತ್ಯಾದಿಗಳನ್ನು ನಾವು ಅನುಭವಿಸುವಂತಾಗುತ್ತದೆ. ಹೀಗಾಗಿ ಮೇದೋಜ್ಜೀರಕ ಗ್ರಂಥಿಯ ಆರೋಗ್ಯವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಇದಕ್ಕಾಗಿ ಮನೆಯಲ್ಲಿಯೇ ಅನುಸರಿಸಬಹುದಾದ ಕೆಲವು ಸರಳ ಉಪಾಯಗಳಿಲ್ಲಿವೆ.

* ಕೆಫೀನ್ ಸೇವನೆಯ ಮೇಲೆ ಹಿಡಿತವಿರಲಿ

  ಶರೀರ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಶರೀರದಲ್ಲಿ ನೀರಿನ ಕೊರತೆಯಾದರೆ ಅದು ಹಲವಾರು ಜೀರ್ಣ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ನೇರವಾಗಿ ಮೇದೋಜ್ಜೀರಕ ಗ್ರಂಥಿಗೆ ಹಾನಿಯಾಗುತ್ತದೆ. ಹೆಚ್ಚೆೆಚ್ಚು ಚಹಾ ಅಥವಾ ಕಾಫಿಯನ್ನು ಸೇವಿಸುತ್ತಿದ್ದರೆ ಈ ಸಮಸ್ಯೆಯು ಇನ್ನಷ್ಟು ಬಿಗಡಾಯಿಸುತ್ತದೆ. ಏಕೆಂದರೆ ಕೆಫೀನ್ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಮತ್ತು ಇದು ಮೇದೋಜ್ಜೀರಕ ಗ್ರಂಥಿಯ ಉರಿಯೂತವನ್ನು ಉಂಟು ಮಾಡುತ್ತದೆ. ಹೀಗಾಗಿ ದಿನಕ್ಕೆ ಕನಿಷ್ಠ 8ರಿಂದ 10 ಗ್ಲಾಸ್ ನೀರು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಆಗಾಗ್ಗೆ ಕೆಫೀನ್ ಸೇವಿಸುತ್ತಿದ್ದರೆ ಅದು ನಿಧಾನವಾಗಿ ಮೇದೋಜ್ಜೀರಕ ಗ್ರಂಥಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

* ಜಂಕ್ ಫುಡ್‌ನಿಂದ ದೂರವಿರಿ

  ಜಂಕ್ ಫುಡ್ ಸೇವನೆಯು ಹೊಟ್ಟೆಯ ಸಮಸ್ಯೆಗಳನ್ನು ಉಂಟು ಮಾಡುವುದರ ಜೊತೆಗೆ ಬೊಜ್ಜು ಮತ್ತು ಆಹಾರವು ವಿಷಯುಕ್ತಗೊಳ್ಳಲು ಕಾರಣವಾಗುತ್ತದೆ. ನಿಯಮಿತವಾಗಿ ಜಂಕ್ ಫುಡ್ ಸೇವನೆಯು ಮೇದೋಜ್ಜೀರಕ ಗ್ರಂಥಿಯಲ್ಲಿ ಜೀರ್ಣ ಕಿಣ್ವಗಳ ಉತ್ಪಾದನೆಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಹೀಗಾಗಿ ಮೇದೋಜ್ಜೀರಕ ಗ್ರಂಥಿಯು ಆರೋಗ್ಯಪೂರ್ಣವಾಗಿರಬೇಕು ಎಂದಿದ್ದರೆ ಜಂಕ್ ಫುಡ್‌ನಿಂದ ದೂರವಿರಬೇಕು.

* ಹೊಟ್ಟೆಯಲ್ಲಿ ವಾಯು ನಿರ್ಮಾಣಗೊಳ್ಳಲು ಅವಕಾಶ ನೀಡಬೇಡಿ

ನಮ್ಮ ಹೊಟ್ಟೆ ಭಾರವಾದಾಗ ಅಥವಾ ವಾಯು ಉಂಟಾದಾಗ ಹಲವಾರು ಜೀರ್ಣ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯವಿದೆ.

ವಾಯುವು ಆಮ್ಲೀಯತೆಗೆ ಕಾರಣವಾಗುತ್ತದೆ ಮತ್ತು ಇದು ಮೇದೋಜ್ಜೀರಕ ಗ್ರಂಥಿಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಲಿಂಬೆಹಣ್ಣು,ಶುಂಠಿ ಇತ್ಯಾದಿಗಳು ವಾಯು ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗುತ್ತವೆ.

* ಈ ತರಕಾರಿಗಳು ನಿಮ್ಮ ಆಹಾರದಲ್ಲಿರಲಿ

ನಾವು ಸೇವಿಸುವ ಆಹಾರಗಳು ಶರೀರದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ ಮೇದೋಜ್ಜೀರಕ ಗ್ರಂಥಿಯ ಆರೋಗ್ಯವನ್ನು ಕಾಯ್ದುಕೊಳ್ಳಲು ಕರುಳಿನ ಆರೋಗ್ಯಕ್ಕೆ ಪೂರಕವಾದ ತರಕಾರಿಗಳು ನಮ್ಮ ಆಹಾರದಲ್ಲಿರಬೇಕು. ಕಾಲಿಫ್ಲವರ್, ಬ್ರೊಕೋಲಿ,ಕ್ಯಾಬೇಜ್ ಮತ್ತು ಮೂಲಂಗಿ ಇತ್ಯಾದಿಗಳು ಈ ತರಕಾರಿಗಳಾಗಿವೆ. ಬೆಳ್ಳುಳ್ಳಿಯು ಉರಿಯೂತ ನಿರೋಧಕ ಗುಣವನ್ನು ಹೊಂದಿರುವುದರಿಂದ ಮೇದೋಜ್ಜೀರಕ ಗ್ರಂಥಿಯ ಆರೋಗ್ಯಕ್ಕೆ ಪೂರಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News