ಐಎಂಎ ವಂಚನೆ ಪ್ರಕರಣ: ಆದ್ಯತೆ ಮೇರೆಗೆ ಅರ್ಜಿ ಪರಿಗಣಿಸಿ- ಹೈಕೋರ್ಟ್ ನಿರ್ದೇಶನ

Update: 2020-01-22 18:07 GMT

ಬೆಂಗಳೂರು, ಜ.22: ಐ ಮಾನಿಟರಿ ಅಡ್ವೈಸರಿ(ಐಎಂಎ) ಕಂಪೆನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ಖಚಿತಪಡಿಸಲು ವಿಶೇಷ ಕೋರ್ಟ್ ಆದ್ಯತೆ ಮೇರೆಗೆ ಅರ್ಜಿ ಪರಿಗಣಿಸಲು ಗಮನಕ್ಕೆ ತರುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿದೆ.

ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹೈದರಾಬಾದ್ ಘಟಕದ ಜಂಟಿ ನಿರ್ದೇಶಕ ಎ.ವೈ.ವಿ.ಕೃಷ್ಣ ಅವರ ಎರವಲು ಸೇವಾ ಅವಧಿಯನ್ನು ಮುಂದುವರಿಸಲಾಗಿದೆ ಎಂದು ಸಿಬಿಐ ಪರ ವಕೀಲ ಪ್ರಸನ್ನಕುಮಾರ್, ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಐಎಂಎ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಅಧಿಕಾರಿಗಳ ವಿರುದ್ಧದ ತನಿಖೆಗೆ ಪೂರ್ವಾನುಮತಿ ನೀಡುವ ಕುರಿತು ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳಲು ಸರಕಾರಕ್ಕೆ ಸೂಚನೆ ನೀಡಿತು.

ಸಿಬಿಐನವರು ಇಲ್ಲಿಯವರೆಗೆ ತನಿಖೆ ನಡೆಸಿರುವ ಕುರಿತ ವರದಿಯನ್ನು ಫೆ.28ಕ್ಕೆ ಸಲ್ಲಿಸಲು ಸೂಚಿಸಿತು. ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವನ್ನು ರಚಿಸಲಾಗಿದೆ, ಆದರೆ, ಇಲ್ಲಿಯವರೆಗೆ ಪ್ರಾಧಿಕಾರಕ್ಕೆ ಸಿಬ್ಬಂದಿ, ಮೂಲಭೂತ ಸೌಲಭ್ಯಗಳನ್ನು ಏಕೆ ಒದಗಿಸಿಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು ಈ ಸಕ್ಷಮ ಪ್ರಾಧಿಕಾರಕ್ಕೆ ಈ ಕೂಡಲೇ ಮೂಲಭೂತ ಸೌಲಭ್ಯ ಸೇರಿ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಸೂಚಿಸಿ, ವಿಚಾರಣೆಯನ್ನು ಮಾ.5ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News