ನ್ಯೂಝಿಲ್ಯಾಂಡ್ ‘ಎ’ ವಿರುದ್ಧ ಜಯ ಸಾಧಿಸಿದ ಭಾರತ ‘ಎ’

Update: 2020-01-22 19:27 GMT

ವೆಲ್ಲಿಂಗ್ಟನ್, ಜ.22: ಭಾರತ ‘ಎ’ ತಂಡ ಬುಧವಾರ ನಡೆದ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ‘ಎ’ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

   ನ್ಯೂಝಿಲ್ಯಾಂಡ್ ವಿರುದ್ಧ ಏಕದಿನ ತಂಡದಲ್ಲಿ ಗಾಯಗೊಂಡ ಶಿಖರ್ ಧವನ್ ಅವರ ಸ್ಥಾನಕ್ಕೆ ಆಯ್ಕೆಯಾದ ಒಂದು ದಿನದ ನಂತರ 20 ವರ್ಷದ ಶಾ 35 ಎಸೆತಗಳಲ್ಲಿ 48 ರನ್ ಗಳಿಸಿ ತಂಡದ ಗೆಲುವಿಗೆ ಅಡಿಪಾಯ ಹಾಕಿಕೊಟ್ಟರು.

   ಭಾರತದ ಟ್ವೆಂಟಿ-20 ತಂಡದಲ್ಲಿ ಧವನ್ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ 21 ಎಸೆತಗಳಲ್ಲಿ 39 ರನ್ ಗಳಿಸಿದರು, ಸೂರ್ಯಕುಮಾರ್ ಯಾದವ್ ಕೇವಲ 19 ಎಸೆತಗಳಲ್ಲಿ 35 ರನ್ ಗಳಿಸಿದರು.

   ಗೆಲುವಿಗೆ 231 ರನ್‌ಗಳ ಸವಾಲು ಪಡೆದ ಭಾರತ ತಂಡ 29.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 231 ರನ್ ಗಳಿಸಿ ಸುಲಭವಾಗಿ ಗೆಲುವಿನ ದಡ ಸೇರಿದೆ.

   ಮುಹಮ್ಮದ್ ಸಿರಾಜ್ ಅವರು ಭಾರತ ‘ಎ’ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಅವರು 6.3 ಓವರ್‌ಗಳಲ್ಲಿ 33 ರನ್‌ಗಳಿಗೆ 3ವಿಕೆಟ್‌ಗಳನ್ನು ಪಡೆದರು. ಖಲೀಲ್ ಅಹ್ಮದ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

 ನ್ಯೂಝಿಲ್ಯಾಂಡ್ ‘ಎ’ ತಂಡ 48.3 ಓವರ್‌ಗಳಲ್ಲಿ 230 ರನ್‌ಗಳಿಗೆ ಆಲೌಟಾಗಿತ್ತು.

  ನ್ಯೂಝಿಲ್ಯಾಂಡ್ ತಂಡದ ಪರ ರಚಿನ್ ರವೀಂದ್ರ 58 ಎಸೆತಗಳಲ್ಲಿ 49 ರನ್ ಮತ್ತು ನಾಯಕ ಟಾಮ್ ಬ್ರೂಸ್ 55 ಎಸೆತಗಳಲ್ಲಿ 47 ರನ್ ಗಳಿಸಿದರು.

ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಾ ಮತ್ತು ಮಾಯಾಂಕ್ ಅಗರ್ವಾಲ್ (29) ಮೊದಲ ವಿಕೆಟ್‌ಗೆ 9.1 ಓವರ್‌ಗಳಲ್ಲಿ 79 ರನ್ ಗಳಿಸುವುದರೊಂದಿಗೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ನಾಯಕ ಶುಭ್‌ಮನ್ ಗಿಲ್ (30) ಎರಡಂಕೆಯ ಸ್ಕೋರ್ ದಾಖಲಿಸಿ ಔಟಾದ ಬಳಿಕ ಸ್ಯಾಮ್ಸನ್ ತನ್ನ ಪರಾಕ್ರಮವನ್ನು ತೋರಿಸಿದರು. ಅವರು ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು. ವಿಜಯ್ ಶಂಕರ್ (20) ಮತ್ತು ಕ್ರುನಾಲ್ ಪಾಂಡ್ಯ (13)ಎರಡಂಕೆಯ ಕೊಡುಗೆ ನೀಡಿದರು. ಮುಂಬೈ ಆಟಗಾರ ಸೂರ್ಯಕುಮಾರ್ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ ತಮ್ಮ ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು.

 ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ‘ಎ’ 1-0 ಮುನ್ನಡೆ ಸಾಧಿಸಿದೆ. ಎರಡನೇ ಮತ್ತು ಮೂರನೇ ಅನಧಿಕೃತ ಏಕದಿನ ಪಂದ್ಯಗಳು ಕ್ರಮವಾಗಿ ಶುಕ್ರವಾರ ಮತ್ತು ಭಾನುವಾರ ಕ್ರೈಸ್ಟ್ ಚರ್ಚ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News