ವಿಎಚ್‌ಪಿ, ಆರೆಸ್ಸೆಸ್ ಕಾರ್ಯಸೂಚಿ ಜಾರಿಗೆ ಮಾತ್ರ ಬಿಜೆಪಿ ಸೀಮಿತ: ಕುಮಾರಸ್ವಾಮಿ

Update: 2020-01-23 16:53 GMT

ಬೆಂಗಳೂರು, ಜ.23: ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ನಾಯಕರು ಪ್ರಜಾಪ್ರಭುತ್ವದಡಿಯಲ್ಲಿ ಸರಕಾರ ನಡೆಸುತ್ತಿಲ್ಲ. ಬದಲಿಗೆ, ವಿಎಚ್‌ಪಿ, ಆರೆಸ್ಸೆಸ್ ಕಾರ್ಯಸೂಚಿಯನ್ನು ಜಾರಿಗೆ ತರುವುದಕ್ಕಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಆರಮನೆ ಮೈದಾನದಲ್ಲಿ ಅಯೋಜಿಸಿರುವ ಜೆಡಿಎಸ್‌ನ ರಾಜ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸಂವಿಧಾನ ಬಾಹಿರ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ರಾಜ್ಯದ 224 ಕ್ಷೇತ್ರಗಳಲ್ಲಿ ಮನೆ ಮನೆಗೆ ತೆರಳಿ ಕರಪತ್ರ ಹಂಚಲಾಗುವುದೆಂದು ತಿಳಿಸಿದರು.

ಬೆಂಗಳೂರಿನ ಮಹದೇವಪುರದಲ್ಲಿ ಉತ್ತರ ಕರ್ನಾಟಕದಿಂದ ಕೂಲಿಗಾಗಿ ಇಲ್ಲಿಗೆ ಬಂದು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದರು. ಬಿಜೆಪಿ ನಾಯಕರಿಗೆ ಗುಡಿಸಲಲ್ಲಿ ವಾಸಿಸುವವರು, ಬಡವರೆಲ್ಲರೂ ಬಾಂಗ್ಲಾದೇಶಿಯವರೆಂಬ ಕಲ್ಪಿತ ಭಾವನೆಯಿದೆ. ಹೀಗಾಗಿ ಅಲ್ಲಿದ್ದ ಎಲ್ಲ ಗುಡಿಸಲುಗಳನ್ನು ನೆಲಸಮ ಮಾಡಿದ್ದಾರೆ. ಹೀಗಾಗಿ ಬಿಜೆಪಿಗೆ ಕೇವಲ ಬಾಂಗ್ಲಾದೇಶದ ಮುಸ್ಲಿಮರ ಮೇಲಿನ ದ್ವೇಷವಲ್ಲ. ದೇಶದಲ್ಲಿರುವ ಎಲ್ಲ ಬಡವರ ಮೇಲೆಯೂ ದ್ವೇಷವಿದೆ ಎಂದು ಅವರು ಹೇಳಿದರು.

ಬಿಜೆಪಿ, ಆರೆಸ್ಸೆಸ್ ಹಿಂದೂಗಳೆಲ್ಲರು ಒಂದು ಅನ್ನುತ್ತಾರೆ. ಆದರೆ, ದಲಿತರನ್ನು, ಶೂದ್ರರನ್ನು ಹಾಗೂ ಅಲೆಮಾರಿಗಳನ್ನು ಮನೆ, ದೇವಸ್ಥಾನಕ್ಕೆ ಬಿಡಲ್ಲ. ಗೃಹ ಮಂತ್ರಿ ಅಮಿತ್ ಶಾ ರಾಜ್ಯಕ್ಕೆ ಬಂದಾಗ, ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಕೇವಲ ಪಾಕಿಸ್ತಾನದ ವಿರುದ್ಧ ಭಾಷಣ ಮಾಡಿ ಹೋಗುತ್ತಾರೆಂದು ಅವರು ಹೇಳಿದರು.

ಜೆಡಿಎಸ್ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ. ಸೋಲು ಯಾವತ್ತೂ ಶಾಶ್ವತ ಅಲ್ಲ. ಸೋಲಿನಿಂದ ಕಾರ್ಯಕರ್ತರು ಎದೆಗುಂದಬಾರದು. 1989ರಲ್ಲಿ ದೇವೇಗೌಡರು ಹೊಳೆನರಸೀಪುರ ಮತ್ತು ಕನಕಪುರ- ಎರಡೂ ಕಡೆಗಳಲ್ಲಿ ಸೋತಿದ್ದರು. ಆದರೆ, ನಾಲ್ಕೇ ವರ್ಷದಲ್ಲಿ ಪಕ್ಷ ಮೈಕೊಡವಿ ಎದ್ದು ನಿಂತಿತು. ದೇವೇಗೌಡರು ದೇಶದ ಪ್ರಧಾನಿಯಾದರು ಎಂದು ಅವರು ನೆನಪು ಮಾಡಿಕೊಂಡರು.

ಮುಸ್ಲಿಮರ ಮತ ಗಳಿಸಲಿಕ್ಕಾಗಿ ನಾನು ಮಂಗಳೂರಿಗೆ ಹೋಗಿಲ್ಲ, ಮುಸ್ಲಿಮರನ್ನು ಕೊಂದಿರಿ ಎಂದು ನಾನು ಹೇಳಿಲ್ಲ, ಅಮಾಯಕರನ್ನು ಕೊಂದಿದ್ದೀರಿ ಎಂದು ಹೇಳಿದ್ದೆ. ಸಮಾಜ ಒಡೆಯಬೇಕು, ರಕ್ತ ಹರಿಯಬೇಕು ಎಂಬುದು ಬಿಜೆಪಿ ಉದ್ದೇಶ. ಮಂಗಳೂರಿಗೂ, ಕುಮಾರಸ್ವಾಮಿಗೂ ಏನು ಸಂಬಂಧ ಎಂದು ಕೇಳುತ್ತೀರಿ, ಹಾಗಿದ್ದರೆ ಕನಕಪುರಕ್ಕೂ ಕಲ್ಲಡ್ಕ ಪ್ರಭಾಕರ ಭಟ್ಟರಿಗೂ ಏನು ಸಂಬಂಧ ಅವರು ಪ್ರಶ್ನಿಸಿದರು.

2006ರಲ್ಲಿ ಅಧಿಕಾರದ ಆಸೆಯಿಂದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಬಿಜೆಪಿಯವರಿಗೆ ಕಾಂಗ್ರೆಸ್ ಬಗ್ಗೆ ಭಯ ಇಲ್ಲ, ಇರುವುದು ಜೆಡಿಎಸ್ ಬಗ್ಗೆ ಮಾತ್ರ. 2006ರಲ್ಲಿ ಅಧಿಕಾರ್ಕಕಾಗಿ ನಾನು ಬಿಜೆಪಿ ಜತೆ ಹೋಗಿಲ್ಲ. ಪಕ್ಷದ ಉಳಿವಿಗಾಗಿ ಅಂದು ಬಿಜೆಪಿ ಮೈತ್ರಿ ಕಡಿದುಕೊಳ್ಳುವ ನಿರ್ಧಾರ ಕೈಗೊಂಡಿದ್ದೆ ಎಂದು ಅವರು ತಿಳಿಸಿದರು.

ಖರೀದಿಸಿದ್ದರೆ ನಾನೇ ಸಿಎಂ

ಅಧಿಕಾರಕ್ಕಾಗಿ ಯಾರ ಮನೆಯ ಬಾಗಿಲಿಗೂ ಹೋಗಿಲ್ಲ. ನಾನು ಅಧಿಕಾರದಲ್ಲಿ ಇರಲೇಬೇಕೆಂದು ಮನಸು ಮಾಡಿದ್ದರೆ, 200, 300ಕೋಟಿ ರೂ.ಲೂಟಿ ಮಾಡಿ, 10 ಮಂದಿ ಶಾಸಕರನ್ನು ಖರೀದಿ ಮಾಡಬಹುದಿತ್ತು. ಆದರೆ, ಅಂತಹ ಕೆಲಸ ನಾನು ಮಾಡಲ್ಲ. ಅಧಿಕಾರದಿಂದ ಇಳಿಯುವಾಗ ಸಂತೋಷದಿಂದ ತ್ಯಜಿಸಿದ್ದೇನೆ.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಹುಸಿಯಾದ ಅನುಕೂಲ

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರಕಾರವಿದ್ದರೆ ರಾಜ್ಯಕ್ಕೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಜನ ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳಿಂದಷ್ಟೇ ರಾಜ್ಯಕ್ಕೆ ಒಳಿತಾಗುತ್ತದೆ. ರಾಜ್ಯದಲ್ಲಿ ಜೆಡಿಎಸ್ ಬೆಳೆಸುವ ನಿಟ್ಟಿನಲ್ಲಿ ನಮ್ಮ ಗುರಿ ಇರಬೇಕು.

-ವೈಎಸ್‌ವಿ ದತ್ತ, ಜೆಡಿಎಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News