ಮಹಿಳೆಯ ಕೊಲೆ ಪ್ರಕರಣ: ಆರೋಪಿ ಭದ್ರತಾ ಸಿಬ್ಬಂದಿ ಬಂಧನ

Update: 2020-01-23 17:24 GMT

ಬೆಂಗಳೂರು, ಜ.23: ಸುರಕ್ಷಿತ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಲು ನಿರಾಕರಿಸಿದ ಮಹಿಳೆಯ ಕತ್ತು ಸೀಳಿ, ಕೊಲೆಗೈದಿದ್ದ ಆರೋಪದಡಿ ಭದ್ರತಾ ಸಿಬ್ಬಂದಿಯೊರ್ವನನ್ನು ಇಲ್ಲಿನ ಸುಬ್ರಮಣ್ಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೆಆರ್ ಪೇಟೆ ತಾಲೂಕಿನ ಸಂತೇಬಾಚನಹಳ್ಳಿ ನಿವಾಸಿ ಮುಕುಂದ(48) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಗಾಯತ್ರಿನಗರ, 4 ನೆ ಕ್ರಾಸ್‌ನ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದ ಮಂಜುಳಾ ಎಂಬಾಕೆಯನ್ನು ಜ.11ರಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಮೃತ ಮಂಜುಳಾ ಸಹೋದರಿ ನೀಡಿರುವ ದೂರಿನ ಮೇರೆಗೆ ಸುಬ್ರಮಣ್ಯನಗರ ಪೊಲೀಸರು ತನಿಖೆ ನಡೆಸಿ ಆರೋಪಿ ಮುಕುಂದನನ್ನು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಜಿ4 ಗ್ರೂಪ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಆರೋಪಿ ಮುಕುಂದ, 15 ದಿನಗಳಿಗೊಮ್ಮೆ ಸ್ವಂತ ಊರಿಗೆ ಹೋಗಲು ಮೆಜೆಸ್ಟಿಕ್‌ಗೆ ಬಂದಾಗ ಮಂಜುಳಾ ಜೊತೆಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪರಸ್ಪರ ಮಾತುಕತೆ ನಡೆಸಿ 1,500 ರೂ.ಗೆ ಒಪ್ಪಿಸಿದ್ದ. ಬಳಿಕ ಆಕೆ ಮನೆಗೆ ಕರೆದುಕೊಂಡು ಬಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮುಂದಾದಾಗ ಮುಕುಂದ, ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್ ಬಳಸಲು ಒತ್ತಡ ಹಾಕಿದ್ದಾನೆ ಎನ್ನಲಾಗಿದೆ.

ಇದಕ್ಕೆ ಮಂಜುಳಾ ನಿರಾಕರಿಸಿ ಜಗಳ ಮಾಡಿದ್ದಾಳೆ ಎನ್ನಲಾಗಿದ್ದು, ಈ ವೇಳೆ ಮುಕುಂದ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಕೊಲೆ ಮಾಡಿ, ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರ ಮತ್ತು ಮೊಬೈಲ್ ದೋಚಿ ಪರಾರಿಯಾಗಿರುವ ಮಾಹಿತಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News