ಏರ್ ಶೋ ಪಾರ್ಕಿಂಗ್‌ನಲ್ಲಿ ಅಗ್ನಿ ಅವಘಡ: ತನಿಖಾ ಪ್ರಗತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

Update: 2020-01-23 17:45 GMT

ಬೆಂಗಳೂರು, ಜ.23: ಯಲಹಂಕದ ಏರೋ ಇಂಡಿಯಾದ ಡೊಮೆಸ್ಟಿಕ್ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ದೂರಿನ ಮೇಲಿನ ಈವರೆಗಿನ ತನಿಖಾ ಪ್ರಗತಿ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮಾ.2ಕ್ಕೆ ಮುಂದೂಡಿದೆ.

ಈ ಕುರಿತು ನಗರದ ನಿವಾಸಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ, ವಕೀಲೆ ಗೀತಾ ಮಿಶ್ರಾ ಅವರು ಅಗ್ನಿ ಅವಘಡದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಹಸ್ತಾಂತರಿಸಲು ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಮೇಲಿನ ಆದೇಶ ನೀಡಿತು.

ಸರಕಾರದ ಪರ ವಾದಿಸಿದ ವಕೀಲ ಶ್ರೀನಿಧಿ ಅವರು, ಏರೋ ಇಂಡಿಯಾದ ಡೊಮೆಸ್ಟಿಕ್ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅಗ್ನಿ ಅವಘಡ ಪ್ರಕರಣದ ಈವರೆಗಿನ ತನಿಖಾ ಪ್ರಗತಿ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು.

2019ರ ಫೆ.23ರಂದು ಬೆಂಗಳೂರು ಏರ್ ಶೋ ಸಂದರ್ಭದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಸುಮಾರು 400ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿದ್ದವು. ಯಾರೋ ಕಿಡಿಗೇಡಿಗಳು ಧೂಮಪಾನ ಮಾಡಿ ಕಡ್ಡಿ ಬಿಸಾಕಿದ್ದರಿಂದ ಅದು ಒಣ ಹುಲ್ಲಿನ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿತ್ತು. ಆದರೆ, ಯಾವುದೆ ನಿಖರವಾದ ಕಾಣ ತಿಳಿದಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News