ತೆರಿಗೆ ಬಾಕಿ ಉಳಿಸಿಕೊಂಡವರ ಆಸ್ತಿ ಜಪ್ತಿಗೆ ಬಿಬಿಎಂಪಿ ಕಠಿಣ ಕ್ರಮ

Update: 2020-01-23 18:21 GMT

ಬೆಂಗಳೂರು, ಜ.23: ನಗರದಲ್ಲಿ ದೀರ್ಘ ಸಮಯದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲಕರ ಆಸ್ತಿ ಜಪ್ತಿ ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪಾಲಿಕೆ ಮುಂದಾಗಿದೆ. ಈ ಮಧ್ಯೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಎಷ್ಟು ಬಾರಿ ನೋಟಿಸ್ ನೀಡಲಾಗಿದೆ ಎಂದು ವಿವರಣೆ ಕೇಳಿ ಬಿಬಿಎಂಪಿಯ ಜಂಟಿ ಆಯುಕ್ತರಿಗೆ ನೋಟಿಸ್ ನೀಡಲು ಕಂದಾಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಸರಕಾರಿ ಇಲಾಖೆಗಳೂ ಸೇರಿದಂತೆ ಹಲವರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಆಸ್ತಿ ತೆರಿಗೆ ಪಾವತಿಸುವಂತೆ ಹಲವು ಬಾರಿ ನೋಟಿಸ್ ನೀಡಿದರೂ ಕೆಲವರು ತೆರಿಗೆ ಪಾವತಿ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಪ್ತಿ ಅಸ್ತ್ರ ಬಳಸಲು ಪಾಲಿಕೆ ಇತ್ತೀಚೆಗೆ ನಿರ್ಧರಿಸಿತ್ತು. ಯಾವ ವಲಯದಲ್ಲಿ ಎಷ್ಟು ಸೊತ್ತುಗಳಿಗೆ ನೋಟಿಸ್ ನೀಡಲಾಗಿದೆ. ಎಷ್ಟು ಬಾರಿ ನೋಟಿಸ್ ನೀಡಲಾಗಿದೆ ಎಂಬ ವಿವರವನ್ನೇ ಅಧಿಕಾರಿಗಳು ಕಂದಾಯ ವಿಭಾಗದ ಅಧಿಕಾರಿಗಳಿಗೆ ಸಲ್ಲಿಕೆ ಮಾಡದೆ ಇರುವುದರಿಂದ ವಾಸ್ತವ ಸ್ಥಿತಿ ಏನಿದೆ ಎನ್ನುವುದು ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಂಟು ವಲಯದ ಜಂಟಿ ಆಯುಕ್ತರಿಗೆ ಈ ಬಗ್ಗೆ ನೋಟಿಸ್ ಜಾರಿ ಮಾಡಲು ಕಂದಾಯ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ನಿಮ್ಮ ವಲಯದಲ್ಲಿ ಎಷ್ಟು ಮಾಲಕರು ಆಸ್ತಿ ತೆರಿಗೆ ಮತ್ತು ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಹಾಗೂ ಅವರಿಗೆ ಎಷ್ಟು ಬಾರಿ ನೋಟಿಸ್ ನೀಡಲಾಗಿದೆ ಎನ್ನುವ ವಿವರಗಳನ್ನು ಕೂಡಲೇ ನೀಡುವಂತೆ ವಿವರಣೆ ಕೇಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮಧ್ಯೆ ನಕ್ಷೆ ಹಾಗೂ ನಿಯಮಾವಳಿ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿಕೊಂಡಿರುವ ಮಾಲಕರಿಗೆ ದುಪ್ಪಟ್ಟು ದಂಡ ವಿಧಿಸುವುದಕ್ಕೆ ಸರಕಾರದ ಮಟ್ಟದಲ್ಲಿ ತೀರ್ಮಾನಿಸಲಾಗಿದೆ. ಆದರೆ, ಆಸ್ತಿ ಜಪ್ತಿ ಮಾಡುವುದಕ್ಕೆ ಪಾಲಿಕೆಗೆ ಪೂರ್ಣ ಅಧಿಕಾರ ಇಲ್ಲ ಎಂದು ಪಾಲಿಕೆಯ ಕೆಲವು ಸದಸ್ಯರು ತಿಳಿಸಿದ್ದಾರೆ.

ಮುಳುವಾದ ನಿಯಮಗಳು: ಸ್ವಯಂ ಘೋಷಿತ ಆಸ್ತಿ ವ್ಯವಸ್ಥೆಯಡಿ ಮಾಲಕರೇ ಆಸ್ತಿಯ ಸುತ್ತಳತೆ ವಿವರ ನಮೂದಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಇದರಲ್ಲೂ ಲೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇದರ ಬಗ್ಗೆ ಪರಿಶೀಲನೆ ಮಾಡಿ ಪಾಲಿಕೆಗೆ ಉಂಟಾಗುತ್ತಿರುವ ನಷ್ಟವನ್ನು ತಪ್ಪಿಸುವ ಉದ್ದೇಶದಿಂದ ಟೋಟಲ್ ಸ್ಟೇಷನ್ ಸರ್ವೇ ಪರಿಚಯಿಸಲಾಗಿತ್ತು. ಇದರಿಂದ ಪಾಲಿಕೆಗೆ 290 ಕೋಟಿ ರೂ. ನಷ್ಟವುಂಟಾಗಿರುವುದು ಬೆಳಕಿಗೆ ಬಂದಿತ್ತು.

ನಿಯಮ ಪರಿಶೀಲಿಸದ ಅಧಿಕಾರಿಗಳು: ನಕ್ಷೆ ಹಾಗೂ ನಿಯಮಾವಳಿ ಉಲ್ಲಂಘನೆ ಮಾಡಿದ ಮಾಲಕರ ಮೇಲೆ ಈಗ ಪಾಲಿಕೆ ಏಕಾಏಕಿ ದುಪ್ಪಟ್ಟು ತೆರಿಗೆ ವಿಧಿಸುವ ಮುನ್ನ ಮಾಲಕರು ನಿಯಮ ಉಲ್ಲಂಘನೆ ಮಾಡಲು ಅವಕಾಶ ಮಾಡಿಕೊಟ್ಟ ಪಾಲಿಕೆಯ ಅಧಿಕಾರಿಗಳಿಗೂ ದಂಡ ವಿಧಿಸಬೇಕು ಎಂದು ನಗರಾಭಿವೃದ್ಧಿ ತಜ್ಞ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ವಿ.ರವೀಂದ್ರ ಅಭಿಪ್ರಾಯಪಟ್ಟಿದ್ದಾರೆ.

ಆಸ್ತಿ ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ಮಾಲಕರ ಚರ ಆಸ್ತಿಗಳನ್ನು ಜಪ್ತಿ ಮಾಡಬಹುದು. ಒಟ್ಟಾರೆ ಆಸ್ತಿಯನ್ನೇ ಜಪ್ತಿ ಮಾಡಿ ಪಾಲಿಕೆ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಸ್ವತ್ತುಗಳ ಮಾಲಕರು ಪಾಲಿಕೆಗೆ ನಿಯಮಾನುಸಾರ ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಬೇಕಾಗುತ್ತದೆ. ಆಗಲೂ ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದಲ್ಲಿ ಅವರ ಚರ ಆಸ್ತಿಗಳನ್ನು ಪಾಲಿಕೆ ವಶಕ್ಕೆ ಪಡೆದುಕೊಳ್ಳಬಹುದು.

-ಎಂ.ಶಿವರಾಜು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News