ಬಿಜೆಪಿಯ ಕಪಿಲ್ ಮಿಶ್ರಾ ಅವರ ‘ಕೋಮುವಾದಿ ಟ್ವೀಟ್’ ಅಳಿಸುವಂತೆ ಟ್ವಿಟರ್‌ಗೆ ಚು.ಆಯೋಗ ಸೂಚನೆ

Update: 2020-01-24 09:10 GMT

 ಹೊಸದಿಲ್ಲಿ, ಜ.24: ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಯ ಕಪಿಲ್ ಮಿಶ್ರಾ ಅವರ ಕೋಮುವಾದಿ ಟ್ವೀಟನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗವು ಟ್ವಿಟರ್‌ಗೆ ತಿಳಿಸಿದೆ.

 ದಿಲ್ಲಿಯಲ್ಲಿ ನಡೆಯುತ್ತಿರುವ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯನ್ನು ಟ್ವಿಟರ್‌ನಲ್ಲಿ ಟೀಕಿಸಿರುವ ಮಿಶ್ರಾ, ದಿಲ್ಲಿಯ ಕೆಲವು ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಉಲ್ಲೇಖಿಸುವ ಮೂಲಕ ಅತ್ಯಂತ ಆಕ್ಷೇಪಾರ್ಹ ಹಾಗೂ ಕೋಮುವಾದದ ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಾರೆ ಎಂದು ಟ್ವಿಟರ್‌ಗೆ ಬರೆದಿರುವ ಪತ್ರವೊಂದರಲ್ಲಿ ಚುನಾವಣಾ ಆಯೋಗ ತಿಳಿಸಿದೆ.

ಗುರುವಾರ ಟ್ವೀಟ್ ಮಾಡಿದ್ದ ಎಎಪಿಯ ಮಾಜಿ ಸಚಿವ ಮಿಶ್ರಾ,‘‘ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟಿಸಿ ನಡೆಯುತ್ತಿರುವ ಶಾಹೀನ್ ಬಾಗ್‌ನ್ನು ಪಾಕಿಸ್ತಾನದ ಪ್ರವೇಶ ದ್ವಾರ ಎಂದು ಉಲ್ಲೇಖಿಸಿದ್ದರು. ಪಾಕಿಸ್ತಾನಿಯರು ಸಾಹೀನ್ ಬಾಘ್ ಮೂಲಕ ಭಾರತ ಪ್ರವೇಶಿಸುತ್ತಾರೆ. ದಿಲ್ಲಿಯಲ್ಲಿ ಮಿನಿ ಪಾಕಿಸ್ತಾನ ಸೃಷ್ಟಿಸಲಾಗುತ್ತಿದೆ...ಶಾಹೀನ್ ಬಾಗ್‌, ಚಂದ್ ಬಾಗ್‌ ಹಾಗೂ ಇಂದ್ರಲೋಕ್ ಇದಕ್ಕೆ ಉತ್ತಮ ಉದಾಹರಣೆ. ಇಲ್ಲಿ ದೇಶದ ಕಾನೂನು ಪಾಲಿಸಲಾಗುತ್ತಿಲ್ಲ. ಪಾಕಿಸ್ತಾನದ ದಂಗೆಕೋರರು ರಸ್ತೆಯನ್ನು ಆಕ್ರಮಿಸಿಕೊಂಡಿದ್ದಾರೆ’’ ಎಂದು ಟ್ವೀಟ್ ಮಾಡಿದ್ದರು.

ಮತ್ತೊಂದು ಪೋಸ್ಟ್‌ನಲ್ಲಿ ಫೆ.8ರಂದು ನಡೆಯುವ ಅಸೆಂಬ್ಲಿ ಚುನಾವಣೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ದ ಎಂದು ಟ್ವೀಟ್ ಮಾಡಿದ್ದರು.

ಅತ್ಯಂತ ವಿವಾದಾತ್ಮಕ ಟ್ವೀಟ್ ಮಾಡಿರುವ ಮಿಶ್ರಾಗೆ ನೋಟಿಸ್ ಕಳುಹಿಸಲಾಗಿದೆ. ಇನ್ನೊಂದು ದಿನದಲ್ಲಿ ವಿವರಣೆ ನೀಡುವಂತೆ ತಿಳಿಸಲಾಗಿದೆ. ಆದರೆ, ಮಿಶ್ರಾ ತನ್ನ ಉತ್ತರಕ್ಕೆ ಮೂರು ದಿನಗಳ ಕಾಲಾವಕಾಶ ನೀಡುವಂತೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News