ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ: ಪರೇಡ್‌ನಲ್ಲಿ ಪಾಲ್ಗೊಳ್ಳಲಿರುವ ಪೌರ ಕಾರ್ಮಿಕರು

Update: 2020-01-24 18:16 GMT

ಬೆಂಗಳೂರು, ಜ.24: ಈ ಬಾರಿಯ ಗಣರಾಜ್ಯೋತ್ಸವಕ್ಕೆ ನಗರದ ಕಬ್ಬನ್ ರಸ್ತೆಯ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಬಿಬಿಎಂಪಿ ಪೌರ ಕಾರ್ಮಿಕರು ಸ್ವಚ್ಛ ಭಾರತ ಕಲ್ಪನೆಯನ್ನಿಟ್ಟುಕೊಂಡು ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಸಂಬಂಧ ಮೈದಾನದಲ್ಲಿ ಕಳೆದ ಒಂದು ವಾರದಿಂದ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ತಾಲೀಮು ನಡೆಯುತ್ತಿದೆ. ಮೈದಾನದಲ್ಲಿ ಒಂದೆಡೆ ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೊಂದೆಡೆ ಕೆಎಸ್‌ಆರ್‌ಪಿ, ಸ್ಕೌಟ್ಸ್ ಅಂಡ್ ಗೈಡ್ಸ್, ಎನ್‌ಸಿಸಿ, ಸೇವಾದಳ, ವಿವಿಧ ಶಾಲಾ ಮಕ್ಕಳು ಸೇರಿದಂತೆ 1,750 ಮಂದಿಯ 44 ತುಕಡಿಗಳು ಪಥಸಂಚಲನ ತಾಲೀಮು ನಡೆಸಿದ್ದಾರೆ.

ಶುಕ್ರವಾರ ಬಿಬಿಎಂಪಿ ಆಯುಕ್ತ, ನಗರ ಪೊಲೀಸ್ ಆಯುಕ್ತ ಹಾಗೂ ನಗರ ಜಿಲ್ಲಾಧಿಕಾರಿ ಸೇರಿ ಸೇನಾ ಪಡೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ 44 ತುಕಡಿಗಳಿಂದ ಪಥ ಸಂಚಲನ ಹಾಗೂ ಕಿಕ್ಕೇರಿ ಕೃಷ್ಣಮೂರ್ತಿ ದೊಡ್ಡವಾಡ ತಂಡದಿಂದ ನಾಡಗೀತೆ ಮತ್ತು ರೈತಗೀತೆಯ ಅಂತಿಮ ಹಂತದ ತಾಲೀಮು ನಡೆಸಲಾಯಿತು.

ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್, ರವಿವಾರ ಬೆಳಗ್ಗೆ 8.58ಕ್ಕೆ ರಾಜ್ಯಪಾಲರು ಮೈದಾನಕ್ಕೆ ಆಗಮಿಸಲಿದ್ದಾರೆ. ಬಳಿಕ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದು, ಈ ಸಂದರ್ಭದಲ್ಲಿ ವಾಯುಪಡೆಯು ಹೆಲಿಕಾಪ್ಟರ್ ಮೂಲಕ ಪುಪ್ಪವೃಷ್ಟಿ ಮಾಡಲಿದೆ ಎಂದರು

ರಾಜ್ಯಪಾಲರು ಪರೇಡ್ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಎರಡು ಸಾವಿರ ಮಕ್ಕಳಿಂದ ಮೂರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.

ಸಾರ್ವಜನಿಕರಿಗಾಗಿ 4 ಸಾವಿರ, ಅತಿಗಣ್ಯರಿಗೆ ಎರಡು ಸಾವಿರ, ಸ್ವಾತಂತ್ರ ಹೋರಾಟಗಾರರು, ಗಣ್ಯರು, ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಎರಡು ಸಾವಿರ, ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳಿಗಾಗಿ ಎರಡು ಸಾವಿರ ಸೇರಿದಂತೆ ಒಟ್ಟು 10,000 ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಮಾತನಾಡಿ, ಮಾಣೆಕ್ ಷಾ ಪರೇಡ್ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಲಾಗಿದೆ. ಎಂಟು ಡಿಸಿಪಿಗಳ ಸೇರಿದಂತೆ 1,200 ಮಂದಿ ಭದ್ರತಾ ಸಿಬ್ಬಂದಿ ನೇಮಿಸಿದ್ದು, 70 ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೈದಾನದ ಸಮೀಪದಲ್ಲಿರುವ ಎತ್ತರದ ಕಟ್ಟಡಗಳು, ಕಾಮಗಾರಿ ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಜತೆಗೆ ನಗರದ ಎಲ್ಲ ಪೊಲೀಸ್ ಠಾಣೆಗಳ ಮೂಲಕ ಆಯಾ ವ್ಯಾಪ್ತಿಯಲ್ಲಿನ ರೈಲು ನಿಲ್ದಾಣ, ಹೊಟೇಲ್‌ಗಳು ಸೇರಿ ಎಲ್ಲೆಡೆಯೂ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.

ಭದ್ರತೆಗೆ ಸಿದ್ಧತೆ: 9 ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಲಾಗಿದ್ದು, 150 ಅಧಿಕಾರಿಗಳು ಹಾಗೂ 943 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, 10 ಕೆಎಸ್‌ಆರ್‌ಪಿ ತುಕಡಿ, 2 ಡಿಸ್ವಾಟ್ ತಂಡ, 1 ಕ್ಷಿಪ್ರ ಕಾರ್ಯಾಚರಣೆ ಪಡೆ, ಗರುಡಾ ಪಡೆ ಹಾಗೂ ಕಮಾಂಡ್ ಕಂಟ್ರೋಲ್ ವಾಹನವನ್ನು ನಿಯೋಜನೆ ಮಾಡಲಾಗಿದೆ. ಮೈದಾನದ ಸಂಪೂರ್ಣ ತಪಾಸಣೆಗೆ 7 ಎಎಸ್ ಚಕ್ ತಂಡಗಳಿವೆ ಎಂದು ಮಾಹಿತಿ ನೀಡಿದರು.

ನಿಷಿದ್ಧ: ಗಣರಾಜ್ಯೋತ್ಸವ ನಡೆಯುವ ಸ್ಥಳಕ್ಕೆ ಸಿಗರೇಟ್, ಬೆಂಕಿಪೊಟ್ಟಣ, ಕರಪತ್ರ, ಹರಿತವಾದ ವಸ್ತುಗಳು, ಚಾಕು-ಚೂರಿ, ಕಪ್ಪು ಕರವಸ್ತ್ರ, ಬಣ್ಣದ ದ್ರಾವಣ, ವಿಡಿಯೋ, ಸ್ಟಿಲ್ ಕ್ಯಾಮೆರಾ, ಮೊಬೈಲ್, ಹೆಲ್ಮೆಟ್, ಕೊಡೆ, ನೀರಿನ ಬಾಟೆಲ್, ಕ್ಯಾನ್, ಶಸ್ತ್ರಾಸ್ತ್ರಗಳ, ಮದ್ಯದ ಬಾಟಲ್, ತಿಂಡಿ-ತಿನಿಸು, ಬಾವುಟ, ಪಟಾಕಿ ಸೇರಿದಂತೆ ಸ್ಪೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ.

ವಾಹನ ನಿಲುಗಡೆ ನಿಷೇಧ: ಮಾಣೆಕ್ ಷಾ ಮೈದಾನದ ಸುತ್ತಲಿನ ಪ್ರದೇಶವಾದ ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬೈ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ ಹಾಗೂ ಕಬ್ಬನ್ ರಸ್ತೆ, ಎಂಜಿ ರೋಡ್, ಅನಿಲ್ ಕುಂಬ್ಳೆ ರಸ್ತೆಯಿಂದ ಕ್ವೀನ್ಸ್ ವೃತ್ತದವರೆಗೂ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News