ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಧಾನ ಆದ್ಯತೆ ಇರಲಿ: ಸಚಿವೆ ಶಶಿಕಲಾ ಜೊಲ್ಲೆ

Update: 2020-01-24 18:15 GMT

ಬೆಂಗಳೂರು, ಜ.24: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಧಾನ ಆದ್ಯತೆ ನೀಡಬೇಕು. ಜತೆಗೆ ಅವರಲ್ಲಿರುವ ಪ್ರಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸರಕಾರ ಹಾಗೂ ಸಂಘ, ಸಂಸ್ಥೆಗಳ ಕರ್ತವ್ಯವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಗರದ ಬಾಲಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ಮನೆಯಲ್ಲಿ ಹೆಣ್ಣು ಕಲಿತರೆ ಇಡೀ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಭ್ರೂಣ ಹತ್ಯೆ ಮಾಡಬೇಡಿ. ಹೆಣ್ಣಾಗಲಿ ಗಂಡಾಗಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ನೀಡಿ ದೇಶದ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಬೇಕೆಂದು ತಿಳಿಸಿದರು.

ಮಹಿಳೆಯರು ಪುರುಷರಿಗಿಂತ ಕಡಿಮೆಯೇನಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆಗೈದಿರುವ ನಿದರ್ಶನಗಳಿವೆ. ಹೀಗಾಗಿ ಮಹಿಳೆಯನ್ನು ಕೀಳಾಗಿ ಕಾಣುವ ಮನೋಭಾವನೆ ಸಲ್ಲದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೀಗಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಧಾನ ಆದ್ಯತೆ ಕೊಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ್, ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ (ಸಿಬ್ಬಂದಿ) ದೇವರಾಜ್, ಬಾಲಭವನದ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್, ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ವಸುಂಧರಾ ದೇವಿ ಮೊದಲಾದವರು ಉಪಸ್ಥಿತರಿದ್ದರು. ಬಾಕ್ಸ್

ವಿದ್ಯುತ್ ಸ್ಪರ್ಶದಿಂದ ಜೀವ ಕಳೆದುಕೊಳ್ಳುತ್ತಿದ್ದ ಬಾಲಕನನ್ನು ತನ್ನ ಸಮಯ ಪ್ರಜ್ಞೆಯಿಂದ ಉಳಿಸಿದ ಬೆಳಗಾವಿ ಜಿಲ್ಲೆಯ ಸುಖಿ ವಿ.ಉಪಾಧ್ಯೆ ಮತ್ತು ತನ್ನಲ್ಲಿರುವ ಕಲೆಯನ್ನು ಸಮರ್ಥವಾಗಿ ಬಳಸಿಕೊಂಡು ಜನಸಾಮಾನ್ಯರಿಗೆ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಬೆಂಗಳೂರು ನಗರ ಜಿಲ್ಲೆಯ ಬಿ.ಆರ್.ಪ್ರತ್ಯಕ್ಷರನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News