ಸೆರೆನಾ ವಿಲಿಯಮ್ಸ್ ಸವಾಲು ಅಂತ್ಯ

Update: 2020-01-24 18:35 GMT

ಏಳು ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿ ನಿರ್ಗಮಿಸಿದರು.

ಸಾರ್ವಕಾಲಿಕ ಶ್ರೇಷ್ಠ ಗ್ರಾನ್‌ಸ್ಲಾಮ್ ದಾಖಲೆ(24)ಮುರಿಯುವ ವಿಶ್ವಾಸದಲ್ಲಿದ್ದ ವಿಲಿಯಮ್ಸ್ ಎರಡು ಗಂಟೆ ಹಾಗೂ 40 ನಿಮಿಷಗಳ ಕಾಲ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಚೀನಾದ ಕ್ವಿಯಾಂಗ್ ವಾಂಗ್ ವಿರುದ್ಧ 4-6, 7-6(7/2), 5-7 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ವಿಶ್ವದ ನಂ.29ನೇ ಆಟಗಾರ್ತಿ ವಾಂಗ್ ಅಮೆರಿಕದ 8ನೇ ಶ್ರೇಯಾಂಕದ ಸೆರೆನಾ ವಿರುದ್ಧ ಮೊದಲ ಸೆಟ್‌ನ್ನು 6-4 ಅಂತರದಿಂದ ಗೆದ್ದುಕೊಂಡರು. ಎರಡನೇ ಸೆಟನ್ನು ಗೆದ್ದುಕೊಂಡ ಸೆರೆನಾ ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಒಯ್ದರು.ಮೂರನೇ ಸೆಟ್ ಅತ್ಯಂತ ಪೈಪೋಟಿಯಿಂದ ಕೂಡಿತ್ತು. ಅಂತಿಮವಾಗಿ 23 ಗ್ರಾನ್‌ಸ್ಲಾಮ್ ಒಡತಿ ಸೆರೆನಾ 5-7 ಅಂತರದಿಂದ ಸೋತಿದ್ದಾರೆ.

ಸೆರೆನಾ ಗ್ರಾನ್‌ಸ್ಲಾಮ್‌ನಲ್ಲಿ ಒಟ್ಟು 24 ಪ್ರಶಸ್ತಿಗಳನ್ನು ಜಯಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದ ಮಾರ್ಗರೆಟ್ ಕೋರ್ಟ್ ದಾಖಲೆ ಮುರಿಯಲು ಇನ್ನಷ್ಟು ಸಮಯ ಕಾಯಬೇಕಾಗಿದೆ. ಸೆರೆನಾ 2017ರಲ್ಲಿ ಮೆಲ್ಬೋರ್ನ್‌ನಲ್ಲೇ ಕೊನೆಯ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ತಾಯಿಯಾದ ಬಳಿಕ ಸೆರೆನಾ 7 ಗ್ರಾನ್‌ಸ್ಲಾಮ್‌ನಲ್ಲಿ ಸ್ಪರ್ಧಿಸಿದ್ದು ಈ ಪೈಕಿ ನಾಲ್ಕು ಬಾರಿ ಫೈನಲ್‌ಗೆ ತಲುಪಿದ್ದಾರೆ. ಆದರೆ, 24ನೇ ಗ್ರಾನ್‌ಸ್ಲಾಮ್ ಕಿರೀಟ ಕನಸಾಗಿಯೇ ಉಳಿದಿದೆ.

ಇದೇ ಮೊದಲ ಬಾರಿ ನಾಲ್ಕನೇ ಸುತ್ತಿಗೆ ತಲುಪಿರುವ ವಾಂಗ್ ಟ್ಯುನಿಶಿಯದ ಒನ್ಸ್ ಜಾಬೆವುರ್‌ರನ್ನು ಎದುರಿಸಲಿದ್ದಾರೆ. ಕರೊಲಿನ್ ವೋಝ್ನಿಯಾಕಿ ಗಾಯಗೊಂಡು ನಿವೃತ್ತಿಯಾದ ಕಾರಣ ಒನ್ಸ್ ಮುಂದಿನ ಸುತ್ತಿಗೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News