ಮುಂದಿನ 3 ವರ್ಷಗಳಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ಅಗ್ರಸ್ಥಾನಕ್ಕೆ: ಸಿಎಂ ಯಡಿಯೂರಪ್ಪ

Update: 2020-01-25 12:08 GMT

ಬೆಂಗಳೂರು, ಜ. 25: ಮುಂದಿನ ಮೂರು ವರ್ಷಗಳಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವನ್ನು ಭಾರತ ದೇಶದಲ್ಲಿಯೇ ಅಗ್ರಸ್ಥಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ದಾವೋಸ್ ಪ್ರವಾಸದ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವೋಸ್ ಭೇಟಿ ಫಲಪ್ರದವಾಗಿದ್ದು, ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಸಾವಿರಾರು ಕೋಟಿ ರೂ.ಬಂಡವಾಳ ಹೂಡಿಕೆ ಬರುವ ನಿರೀಕ್ಷೆ ಇದೆ ಎಂದರು.

ಹೊಸ ಇತಿಹಾಸ ಸೃಷ್ಟಿ: ಹದಿನಾರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕ ದಾವೋಸ್‌ಗೆ ಭೇಟಿ ನೀಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ ಎಂದ ಅವರು, ತನ್ನ ದಾವೋಸ್ ಭೇಟಿಯಿಂದ ರಾಜ್ಯದ ಜನತೆಗೆ ಅದರಲ್ಲೂ ವಿಶೇಷವಾಗಿ ಯುವಕರಿಗೆ, ರೈತರಿಗೆ ಹೆಚ್ಚು ಲಾಭವಾಗಲಿದೆ ಎಂದು ಹೇಳಿದರು.

ವಿಶ್ವ ಆರ್ಥಿಕ ಶೃಂಗಸಭೆಗೆ ಹಿಂಜರಿಕೆಯಿಂದಲೇ ಭೇಟಿ ನೀಡಿದ್ದೆವು. ಆದರೆ, ಅಲ್ಲಿನ ಭೇಟಿಯ ನಂತರ ಅದರಿಂದ ರಾಜ್ಯಕ್ಕೆ ಆಗುವ ಲಾಭವನ್ನು ಗಮನಿಸಿ ನಿಜಕ್ಕೂ ಅಚ್ಚರಿಯಾಯಿತು. ದಾವೋಸ್‌ಗೆ ಭೇಟಿ ನೀಡದಿದ್ದರೆ ಅಕ್ಷಮ್ಯ ಅಪರಾಧವಾಗುತ್ತಿತ್ತು. ಅಷ್ಟರ ಮಟ್ಟಿಗೆ ದಾವೋಸ್‌ಗೆ ಭೇಟಿ ನೀಡಿದ್ದರಿಂದ ಅನುಕೂಲವಾಗಲಿದೆ ಎಂದರು.

ಯಾವುದೇ ದೇಶ ಯಾವುದೇ ರಾಜ್ಯವೂ ಮಾಡದ ಒಪ್ಪಂದಗಳಿಗೆ ಕರ್ನಾಟಕ ಸಹಿ ಹಾಕಿದೆ. ಅಲ್ಲದೆ, 40ಕ್ಕೂ ಹೆಚ್ಚು ಕಂಪೆನಿಗಳು ಮತ್ತು ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ವಿವಿಧ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕವೇ ಆಕರ್ಷಣೆ: ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕ ರಾಜ್ಯವೇ ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು. ಡಬ್ಲೂ ಇಎಫ್‌ನ ವ್ಯವಸ್ಥಾಪಕ ನಿರ್ದೇಶಕ ಮುರತ್ ಸೊನಮೇಜು ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ರಾಜ್ಯದಲ್ಲಿನ ಔದ್ಯೋಗಿಕ ಸ್ನೇಹಿ ಕಾನೂನುಗಳು ಮತ್ತು ವಾತಾವರಣದ ಬಗ್ಗೆ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡಲಾಗಿದೆ. ರಾಜ್ಯದಲ್ಲಿ ಆ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಇರುವ ಅವಕಾಶಗಳ ಬಗ್ಗೆ ತಿಳಿಸಲಾಗಿದೆ ಎಂದರು.

ರಾಜ್ಯದಲ್ಲಿ ಹೂಡಿಕೆ ಮಾಡುವುದರಿಂದ ಕೈಗಾರಿಕೆಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಆ ಮೂಲಕ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ ಎಂದ ಅವರು, ಖ್ಯಾತ ಲಕ್ಷ್ಮಿ ಮಿತ್ತಲ್, ಅರವಿಂದ ಕಿರ್ಲೊಸ್ಕರ್, ಮಹೇಂದ್ರ, ಜನರಲ್ ಎಲೆಕ್ಟ್ರಿಕಲ್ಸ್, ಡಸೋ ಸಿಸ್ಟಮ್, ಲಾಕೀಡ್ ಮಾರ್ಟಿನ್, ಲೂಲು ಗ್ರೂಪ್, ನೆಸ್ಲೆ, ದಾಲ್ಮಿಯಾ, ನೋವಾ ನಾಸ್ಡಿಕ್ ಸೇರಿದಂತೆ ವಿವಿಧ ಕಂಪೆನಿಗಳ ಮುಖ್ಯಸ್ಥರೊಂದಿಗೆ ಚರ್ಚಿಸಲಾಗಿದೆ ಎಂದರು.

ಹೊಸ ನೀತಿ: ಕರ್ನಾಟಕ ರಾಜ್ಯ ಔದ್ಯೋಗಿಕ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಿದರೆ ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯುವುದರ ಜೊತೆಗೆ ರೈತರಿಗೆ ಅನುಕೂಲವಾಗಲಿದೆ. ಅಲ್ಲದೆ, ಆರ್ಥಿಕ ಬೆಳವಣಿಗೆಗೆ ಪೂರಕ ನೀತಿಗಳನ್ನು ಸರಕಾರ ಜಾರಿಗೆ ತರಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಕೇಂದ್ರಗಳಿಗೆ ಆದ್ಯತೆ: ಬೆಂಗಳೂರು ನಗರವನ್ನು ಹೊರತುಪಡಿಸಿ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಬೀದರ್, ಕಲಬುರ್ಗಿ ಸೇರಿದಂತೆ ಎರಡನೆ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

‘ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರಧಾನ ಮಂತ್ರಿ ಹಾಗೂ ಎಮಿರೇಟ್ ಆಫ್ ದುಬೈನ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೊಮ್ ಅವರನ್ನು ಭೇಟಿ ಮಾಡಿ ರಾಜ್ಯದ ಏಕರೂಪದ ಬೆಳವಣಿಗೆಗೆ ಭೇಟಿ ಮಾಡಿ ಸಹಕಾರ ಕೋರಲಾಗಿದೆ’

-ಜಗದೀಶ್ ಶೆಟ್ಟರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News