ರಾಷ್ಟ್ರ ವಿರೋಧಿ ಪ್ರವೃತ್ತಿಯ ಆಂದೋಲನ ದೇಶದ್ರೋಹ: ರಾಜ್ಯಪಾಲ ವಜೂಭಾಯಿ ವಾಲಾ

Update: 2020-01-25 12:09 GMT

ಬೆಂಗಳೂರು, ಜ.25: ಆಂದೋಲನ ನಡೆಸುವುದು ಪ್ರತಿಯೊಬ್ಬರ ಅಧಿಕಾರವೇ ಆಗಿದೆ. ಆದರೆ, ರಾಷ್ಟ್ರ ವಿರೋಧಿ ಪ್ರವೃತ್ತಿಯ ಆಂದೋಲನ ದೇಶದ್ರೋಹವಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.

ಶನಿವಾರ ನಗರದ ಪುರಭವನ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ ಆಯೋಜಿಸಿದ್ದ, ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಂದೋಲನಗಳು ರಾಷ್ಟ್ರವನ್ನು ಸದೃಢಗೊಳಿಸುವಂತೆ ಇರಬೇಕು ಹೊರತು, ರಾಷ್ಟ್ರದ ವಿಭಜನೆಗೆ, ಜಾತಿ, ಧರ್ಮಕ್ಕಾಗಿ, ಪಕ್ಷಕ್ಕಾಗಿ, ಯಾವುದೋ ವ್ಯಕ್ತಿಯ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳವಂತೆ ಇರಬಾರದು ಎಂದು ನುಡಿದರು.

ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಅವರು ಇಡೀ ಜೀವನವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟರು. ಅವರಿಂದ ನಾವು ಪ್ರೇರೇಪಿತರಾಗಬೇಕಿದೆ ಎಂದ ಅವರು, ರಾಷ್ಟ್ರವನ್ನು ಬಲಪಡಿಸುವಂತಹ ಕೆಲಸಗಳನ್ನು ಮಾಡಿದರೆ ಜನ ನೆನಪು ಮಾಡಿಕೊಳ್ಳುತ್ತಾರೆ ಎಂದರು.

ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ದುಡಿದ ಮಹನೀಯರನ್ನು ಮಾದರಿಯನ್ನಾಗಿ ಇಟ್ಟುಕೊಂಡು ದೇಶ ಕಟ್ಟುಬೇಕಾಗಿದೆ. ಕೇಂದ್ರ ಚುನಾವಣಾ ಆಯೋಗ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಮತದಾರರ ಜಾಗೃತಿಗೆ ಹಲವಾರು ಕಾರ್ಯ ಕ್ರಮಗಳನ್ನು ಹಾಕಿಕೊಂಡಿವೆ. ಹಲವು ಅಧಿಕಾರಿಗಳು ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿದರು.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾತನಾಡಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ ಮತದಾರರ ಬಗ್ಗೆ ಜಾಗೃತಿ ಉಂಟು ಮಾಡಲು ಕೇಂದ್ರ ಚುನಾವಣಾ ಆಯೋಗ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಪ್ರಸ್ತುತ ಸಾಲಿನಿಂದಲೇ ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಮತದಾನ ದಿನ ಮತದಾರರಿಗೆ ವಾಹನ ಸೌಲಭ್ಯ, ಸಖಿ ಮತಗಟ್ಟೆ, ಬುಡಕಟ್ಟು ಜನಾಂಗದವರಿಗಾಗಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವ 16 ಮಂದಿ ಯುವಕರಿಗೆ ಹಾಗೂ ವಿಕಲಚೇತನರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೂ ಪ್ರಶಸ್ತಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News