ಸಿಎಎ ವಿರುದ್ಧ ಬೃಹತ್ ಪ್ರತಿಭಟನೆ: ಬೀದಿನಾಟಕದ ಮೂಲಕ ಗಮನ ಸೆಳೆದ ವಿದ್ಯಾರ್ಥಿನಿಯರು

Update: 2020-01-25 17:28 GMT

ಬೆಂಗಳೂರು, ಜ.25: ಕೇಂದ್ರ ಸರಕಾರದ ಪೌರತ್ವ(ತಿದ್ದುಪಡಿ) ಕಾಯ್ದೆ(ಸಿಎಎ), ಪೌರತ್ವ ನೋಂದಣಿ(ಎನ್‌ಆರ್‌ಸಿ) ಹಾಗೂ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರೋಧಿಸಿ ನೂರಾರು ಮಂದಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಪುರಭವನದ ಎದುರು ಜಮಾಯಿಸಿದ್ದ ನೂರಾರು ಮಂದಿ, ಧರ್ಮದ ಹೆಸರಿನಲ್ಲಿ ದೇಶ ಒಡೆಯಲು ಬಿಡುವುದಿಲ್ಲ. ಹಿಂದೂ, ಮುಸ್ಲಿಮ್ ಎಲ್ಲರೂ ಒಂದೇ. ಈ ದೇಶ ಎಲ್ಲರಿಗೂ ಸೇರಿರುವ ದೇಶ ಎಂದು ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಾವು ಎಲ್ಲರೂ ಭಾರತೀಯರು, ನೀವು ಏನಾದರೂ ಮಾಡಿ ನಮ್ಮ ಹೋರಾಟ ನಿಲ್ಲುವುದಿಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಕಾನೂನುಗಳನ್ನು ಜಾರಿಗೆ ನಾವು ಬಿಡುವುದಿಲ್ಲ. ಎನ್‌ಆರ್‌ಸಿಯನ್ನು ದೇಶದ ಜನರ ಮೇಲೆ ಬಲವಂತವಾಗಿ ಹೇರಿಕೆ ಮಾಡಲು ಮುಂದಾದರೆ ನಾವು ಕೈಕಟ್ಟಿ ಕೂರುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಪ್ರತಿಭಟನಾಕಾರರು ನೀಡಿದರು.

ಮೋದಿ ಮತ್ತು ಅಮಿತ್ ಶಾ ಸೇರಿ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಆರ್ ಕಾಯ್ದೆಗಳೆಲ್ಲವೂ ಒಂದೇ ನಾಣ್ಯದ ಮುಖಗಳು. ಸಾವಿರಾರು ವರ್ಷಗಳಿಂದ ಬದುಕಿರುವ ಇಲ್ಲಿನ ಹಿಂದುಗಳ ಪೌರತ್ವ ಪಡೆಯಲು ಹಲವು ದಾಖಲೆ ಕೊಡಬೇಕು, ಬೇರೆ ದೇಶಗಳಿಂದ ಬರುವ ಹಿಂದುಗಳಿಗೆ ಯಾವುದೇ ದಾಖಲೆ ಬೇಡ. ಇದೆಂತಹ ನ್ಯಾಯ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಇದು ಇಂದೇ ಕೊನೆಯಾಗಬೇಕು. ಬ್ರಿಟಿಷರ ವಿರುದ್ಧ ಮುಸ್ಲಿಮರೂ ಹೋರಾಡಿದ್ದಾರೆ. ಗುಲಾಮರಾಗಿದ್ದವರು ಇಂದು ಅಧಿಕಾರ ಹಿಡಿದಿದ್ದಾರೆ. ವಿಳಾಸವೇ ಇಲ್ಲದವರು ಸಂವಿಧಾನ ರಕ್ಷಕರಾಗಿದ್ದಾರೆ. ಮನುಷ್ಯತ್ವ, ಪ್ರೀತಿ ಇವೆಲ್ಲವೂ ಬಿಜೆಪಿ ಆಡಳಿತದಲ್ಲಿ ಮರೆಯಾಗುತ್ತಿವೆ ಎಂದು ಪ್ರತಿಭಟನಾಕಾರರು ವಿಷಾದಿಸಿದರು.

ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಜಾಮಿಯಾ ವಿವಿಗಳ ಮೇಲಿನ ಸಂಘ ಪರಿವಾರದ ದಾಳಿ ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಕುಸಿತ, ಯುವ ಜನರಿಗೆ ಉದ್ಯೋಗವಿಲ್ಲದೇ ಪರಿತಪಿಸುತ್ತಿರುವುದು, ಶಿಕ್ಷಣ ಸೇರಿದಂತೆ ಬಿಜೆಪಿ ಆಡಳಿತಾವಧಿಯಲ್ಲಿ ದೇಶದ ಅಭಿವೃದ್ಧಿ ಶೂನ್ಯ ಎಂಬ ಸಂದೇಶ ಸಾರುವ ಬೀದಿ ನಾಟಕವನ್ನು ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಪ್ರದರ್ಶಿಸಿದರು.

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಗಣ್ಯ ವ್ಯಕ್ತಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು ಬೀದಿಗಿಳಿದು ಸಂವಿಧಾನ ವಿರೋಧಿ ಕಾನೂನು, ಕಾಯ್ದೆಯ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ, ಕೇಂದ್ರ ಸರಕಾರವು ತನ್ನ ನಿಲುವನ್ನು ಬದಲಿಸಿಕೊಳ್ಳಲು ಮುಂದಾಗದೇ ಇರುವುದು ದುರಂತ.

-ಮನೋಹರ ಎಲವರ್ತಿ, ಸಾಮಾಜಿಕ ಹೋರಾಟಗಾರರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News