ಹೂಡಿಕೆದಾರರ ಅನುಕೂಲಕ್ಕಾಗಿ ಭೂ ಖರೀದಿ ಕಾಯ್ದೆ ಸರಳೀಕರಣ: ಸಿಎಂ ಯಡಿಯೂರಪ್ಪ

Update: 2020-01-25 17:49 GMT

ಬೆಂಗಳೂರು, ಜ.25: ಅಭಿವೃದ್ಧಿ ದೃಷ್ಟಿಯಿಂದ ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭೂಮಿ ಖರೀದಿ ಮತ್ತು ಭೂ ಪರಿವರ್ತನೆ ಕಾಯ್ದೆ ‘ಸರಳೀಕರಣ’ಕ್ಕೆ ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಂಡು ಹಿಂದಿರುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕೆಗಳಿಗೆ ಭೂಮಿ ಖರೀದಿಗೆ ಇದ್ದ ಅಡಚಣೆಗಳನ್ನು ನಿವಾರಿಸಲು ಕಾನೂನು ಬದಲಾವಣೆ ತರಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಡೀಮ್ಡ್ ಅನುಮತಿ: ಕೈಗಾರಿಕಾ ಉದ್ದೇಶಕ್ಕಾಗಿ ಭೂ ಖರೀದಿಗೆ ಅರ್ಜಿ ಸಲ್ಲಿಸಿದ 60 ದಿನಗಳ ಬಳಿಕ ಉನ್ನತ ಮಟ್ಟದ ಸಮಿತಿ ಕಲಂ 109 (1)(1) ಅನ್ವಯ ನೀಡಬೇಕಿದ್ದ ಅನುಮತಿ 30 ದಿನಕ್ಕೆ ಇಳಿಕೆ ಮಾಡಲಾಗುವುದು. ಅಲ್ಲದೆ, 30 ದಿನಗಳಲ್ಲಿ ಅರ್ಜಿ ಇತ್ಯರ್ಥವಾಗದಿದ್ದರೆ ಅದನ್ನು ಡೀಮ್ಡ್ ಅನುಮೋದನೆ ಎಂದು ಪರಿಗಣಿಸುವ ಸಂಬಂಧ ಷರತ್ತುಗಳನ್ನು ಸರಳೀಕರಣ ಮಾಡಲಾಗುವುದು ಎಂದರು.

ಆನ್‌ಲೈನ್: ಕೃಷಿ ಭೂಮಿ ಹೊಂದಿರುವ ಮಾಲಕರು ತಮ್ಮ ಜಮೀನನ್ನು ಕೈಗಾರಿಕೆ ಸೇರಿದಂತೆ ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತಿಸಲು ಇಚ್ಛಿಸಿದ್ದರೆ ಭೂ ಪರಿವರ್ತನೆಯನ್ನು ಆನ್‌ಲೈನ್ ಮೂಲಕ ಸರಳೀಕರಣ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬಂಡವಾಳ ಆಕರ್ಷಣೆ, ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಾಗುವುದು. ಆ ನಿಟ್ಟಿನಲ್ಲಿ ಕಾನೂನುಗಳ ಬದಲಾವಣೆಗೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಿ ವಿಧಾನ ಮಂಡಲದ ಒಪ್ಪಿಗೆ ಪಡೆಯಲಾಗುವುದು ಎಂದು ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿದ್ದು, ಅದನ್ನು ಕೈಗಾರಿಕೆಗಳಿಗೆ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೆ, ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಕೌಶಲ್ಯವುಳ್ಳ ಮಾನವ ಸಂಪನ್ಮೂಲವೂ ಇದ್ದು, ಇದರಿಂದ ಕೈಗಾರಿಕೆಗಳಿಗೆ ಅನುಕೂಲ ಆಗಲಿದೆ ಎಂದರು.

ಬೆಂಗಳೂರಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನ ಸಂಶೋಧನೆ ಸಂಸ್ಥೆಗಳನ್ನು ಕೈಗಾರಿಕೆಗಳೊಂದಿಗೆ ಸಮನ್ವಯ ಮಾಡಲಾಗುವುದು. ಈ ಅಂಶವನ್ನು ಹೊಸ ಕೈಗಾರಿಕೆ ನೀತಿಯಲ್ಲಿ ಅಳವಡಿಸಲಾಗುವುದು ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ರಾಜ್ಯ ಸರಕಾರದ ಮುಖ್ಯ ಕಾರ್ಯರ್ದಿ ಟಿ.ಎಂ.ವಿಜಯ್‌ ಭಾಸ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News