ಕಸ ಮುಕ್ತ ಬೆಂಗಳೂರಿಗೆ ಸೂಕ್ತ ಕ್ರಮ: ಮೇಯರ್ ಗೌತಮ್ ಕುಮಾರ್

Update: 2020-01-25 18:29 GMT

ಬೆಂಗಳೂರು, ಜ.25: ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಡ್ಸನ್ ವೃತ್ತದ ಬಳಿಯ ಕಬ್ಬನ್ ಪಾರ್ಕ್ ಮುಖ್ಯದ್ವಾರದ ಬಳಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2020ಗೆ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಲು ಪಾಲಿಕೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಮೇಯರ್ ಗೌತಮ್ ಕುಮಾರ್, ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಬೆಂಗಳೂರಲ್ಲಿ ಸ್ವಚ್ಛತಾ ಕಾಳಜಿಯು ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2020ಕ್ಕೆ ಮಾತ್ರ ಸೀಮಿತವಾಗಬಾರದು. ಪಾಲಿಕೆ ಅಧಿಕಾರಿಗಳ ಜೊತೆ ಎಲ್ಲಾ ನಾಗರಿಕರು ಕೈಜೋಡಿಸಿ ನಗರಕ್ಕೆ ಮೊದಲ ಸ್ಥಾನ ಸಿಗುವವರೆಗೂ ಸ್ವಚ್ಛತಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ಕಸಮುಕ್ತ ಬೆಂಗಳೂರು ಮಾಡಲು ಪಾಲಿಕೆ ವತಿಯಿಂದ ಈಗಾಗಲೇ ಅನೇಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಇತರರಿಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡಬೇಕಾದರೆ ನಾವು ಕಡ್ಡಾಯವಾಗಿ ಕಸಮುಕ್ತ ನಗರವನ್ನಾಗಿಸಬೇಕು. ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿ ಕಸ ಬಿದ್ದಿರುವುದು ಕಂಡುಬಂದರೆ ಪಾಲಿಕೆ ನಿಯಂತ್ರಣ ಕೊಠಡಿ ಹಾಗೂ ಆರೋಗ್ಯಾಧಿಕರಿಗಳಿಗೆ ಕರೆ ಮಾಡಿದರೆ ಕೂಡಲೆ ಬಿದ್ದಿರುವ ಕಸವನ್ನು ತೆರವುಗೊಳಿಸಲಿದ್ದಾರೆ ಎಂದು ಹೇಳಿದರು.

ವಿಶೇಷ ಆಯುಕ್ತ (ಘನತ್ಯಾಜ್ಯ) ರಂದೀಪ್ ಮಾತನಾಡಿ, ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸಲಿದೆ. ಈ ಪೈಕಿ ಇದುವರೆಗೆ 40 ಸಾವಿರ ಪ್ರತಿಕ್ರಿಯೆಗಳು ನೀಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ನಗರಕ್ಕೆ ಉತ್ತಮ ಅಂಕ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಜಾಥಾದಲ್ಲಿ ವಿರೋಧಪಕ್ಷದ ನಾಯಕ ಅಬ್ದುಲ್ ವಾಜೀದ್, ಜಂಟಿ ಆಯುಕ್ತ ಬಾಲಶೇಖರ್, ಪಲ್ಲವಿ, ಸಂಘದ ಅಧ್ಯಕ್ಷ ಅಮೃತ್ ರಾಜ್ ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News