ಈರುಳ್ಳಿಯ ಕಣ್ಣೀರನ್ನು ಒರೆಸುವ ಬಗೆ ಹೇಗೆ?

Update: 2020-01-25 19:33 GMT

ಮೋದಿ ಸರಕಾರ ತನ್ನ ಆಳ್ವಿಕೆಯಲ್ಲಿರುವ ಹಲವಾರು ರಾಜ್ಯಗಳಲ್ಲಿ ಎಪಿಎಂಸಿ ಸುಧಾರಣೆಯನ್ನು ಮಾಡುವುದಕ್ಕೆ ಇದ್ದ ಸೊಗಸಾದ ಅವಕಾಶವನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲ ಅಂತಹ ಅವಕಾಶಗಳು ದಿನದಿಂದ ದಿನಕ್ಕೆ ಕೈತಪ್ಪಿಹೋಗುತ್ತಿವೆ. ಅದು ಸಾಧ್ಯವಾಗದೆ ಎಲ್ಲವನ್ನೂ ಸೇರಿಸಿಕೊಂಡು ರಾಷ್ಟ್ರೀಯ ಮಾರುಕಟ್ಟೆಗಳನ್ನು ಸ್ಥಾಪಿಸುವ, ಬೆಲೆಗಳನ್ನು ಸ್ಥಿರಗೊಳಿಸುವುದಾಗಲಿ ಅಥವಾ ರೈತರಿಗೆ ಮತ್ತು ಗ್ರಾಹಕರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವ ಸಾಧ್ಯತೆ ಕಡಿಮೆ. 

ಈರುಳ್ಳಿ ಬೆಲೆ ಏರುವುದನ್ನು ತಪ್ಪಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಇದು ಒಂದು ದೊಡ್ಡ ದುಸ್ವಪ್ನವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಹಿಂದೆ ಯುಪಿಎ ಸರಕಾರವನ್ನು ಇದೇ ಕಾರಣಕ್ಕಾಗಿ ಟೀಕಿಸಿದ್ದ ಒಂದು ವೀಡಿಯೊ ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಪ್ರಧಾನ ಮಂತ್ರಿಯವರು ಈಗ ನಾವು ಈರುಳ್ಳಿಗಾಗಿಯೂ ಒಂದು ಲಾಕರ್ ತೆರೆಯಬೇಕು. ಅದರಲ್ಲಿ ಈರುಳ್ಳಿಯನ್ನು ಬೀಗ ಹಾಕಿ ಕಾಪಾಡಿಕೊಳ್ಳಬೇಕು. ಅತಿಥಿಗಳು ಬಂದಾಗ ಬರೀ ಅದರ ವಾಸನೆಯನ್ನು ಬಡಿಸಬೇಕು. ಈ ಯುಪಿಎ ಸರಕಾರಕ್ಕೆ ಈರುಳ್ಳಿಯಿಲ್ಲದೆಯೇ ಕಣ್ಣೀರು ಬರಿಸುವ ಸಾಮರ್ಥ್ಯವಿದೆ. ಅವರು ಮಾಡಿರುವ ಪಾಪಗಳನ್ನು ನೋಡಿ. ಜೋಳ/ಗೋಧಿ/ಬಾಜ್ರ ಇವುಗಳನ್ನು ಈರುಳ್ಳಿಯೊಂದಿಗೆ ತಿಂದು ಬದುಕುತ್ತಿದ್ದ ಭಾರತದ ಬಡವರಿಂದ ಈರುಳ್ಳಿಯನ್ನು ಕಸಿದುಕೊಂಡಿದೆ. ಅವರ ಅಧಿಕಾರವನ್ನು ಇಡೀ ಭಾರತದಿಂದ ನಿರ್ಮೂಲನ ಮಾಡಬೇಕಾಗಿದೆ. ಈಗ ಅವರೇ ಅಧಿಕಾರದಲ್ಲಿದ್ದಾಗ ಈರುಳ್ಳಿ ಬೆಲೆ ಗಗನಕ್ಕೆ ಹೋಗಿದೆ. ಪ್ರಧಾನಿಯವರು ಮೌನವಾಗಿದ್ದಾರೆ.

ಇದರರ್ಥ ಇಷ್ಟೆ. ಬೇರೆಯವರನ್ನು ಟೀಕಿಸುವುದು ಸುಲಭ. ನೀತಿಗಳನ್ನು ರೂಪಿಸುವುದು ಕಷ್ಟದ ಕೆಲಸ. ಅದಕ್ಕೆ ವಿನಯ ಬೇಕು. ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಬೇಕಾದ ಸಂಪನ್ಮೂಲವನ್ನು ಕ್ರೋಡೀಕರಿಸಿಕೊಳ್ಳಬೇಕು. ಆನಂತರ ಅದಕ್ಕೆ ತಕ್ಕ ನೀತಿಯನ್ನು ಜಾರಿಗೊಳಿಸಬೇಕು. ಅದು ಬಾಳುವಂತಿರಬೇಕು. ಅಂತಹ ನೀತಿ ರೂಪಿಸುವುದಕ್ಕೆ ಸಾಧ್ಯವಿದೆ. ಈರುಳ್ಳಿಗೆ ಸಂಬಂಧಿಸಿದ ಹಾಗೆ ಮತ್ತೆ ಇಂತಹ ಅನಾಹುತ ಆಗದ ಹಾಗೆ ಹೇಗೆ ನೋಡಿಕೊಳ್ಳಬಹುದು ಎಂಬುದನ್ನು ಚರ್ಚಿಸೋಣ.

ಈಗಿನ ಈರುಳ್ಳಿ ಬೆಲೆಯ ಏರಿಕೆಯನ್ನು ಊಹಿಸಬಹುದಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ಈರುಳ್ಳಿ ಬೆಲೆ ಹಿಡಿದ ದಾರಿಯನ್ನು ಗಮನಿಸೋಣ. ಸೆಪ್ಟಂಬರ್- ಅಕ್ಟೋಬರ್‌ನಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 50-60ರೂಪಾಯಿ ಆಯಿತು. ಸರಕಾರ ಕನಿಷ್ಠ ರಫ್ತು ಬೆಲೆಯನ್ನು ವಿಧಿಸಿತು (ಎಂಇಪಿ), ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳ ಸಂಗ್ರಹದ ಮೇಲೆ ಮಿತಿಯನ್ನು ಹಾಕಿತು. ಆನಂತರ ಈರುಳ್ಳಿ ರಫ್ತನ್ನು ನಿಷೇಧಿಸಿತು. ಆದರೆ ಈ ಕ್ರಮಗಳಿಂದ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆಗ ವ್ಯಾಪಾರಿಗಳ ಮೇಲೆ ವರಮಾನ ತೆರಿಗೆ ದಾಳಿಯನ್ನು ಕೂಡ ನಡೆಸಲಾಯಿತು. ನೀತಿಯನ್ನು ರೂಪಿಸುವಲ್ಲಿನ ದಿವಾಳಿತನವನ್ನು ಇದು ತೋರಿಸುತ್ತದೆ. ಇಂತಹ ಪರಿಸ್ಥಿತಿ ವರ್ಷ ಬಿಟ್ಟು ವರ್ಷ ನಡೆಯುತ್ತಲೇ ಇದೆ. ಆದರೆ ನಾವು ಇದರಿಂದ ಕಲಿಯಲು ತಯಾರಿಲ್ಲ. ದಿವಂಗತ ಅರುಣ್ ಜೇಟ್ಲಿ ಆಪರೇಷನ್ ಗ್ರೀನ್‌ಗಾಗಿ 500 ಕೋಟಿ ರೂಪಾಯಿಗಳನ್ನು 2018ರ ಬಜೆಟ್‌ನಲ್ಲಿ ಘೋಷಿಸಿದರು. ಟೊಮಾಟೊ, ಈರುಳ್ಳಿ ಹಾಗೂ ಆಲೂಗಡ್ಡೆಯ ಬೆಲೆಗಳನ್ನು ಸ್ಥಿರಗೊಳಿಸುವ ಉದ್ದೇಶಕ್ಕಾಗಿ ಇದನ್ನು ಮಾಡಲಾಗಿತ್ತು. ಆಹಾರ ಸಂಸ್ಕರಣಾ ಮಂತ್ರಾಲಯ ಇದನ್ನು ಜಾರಿಗೊಳಿಸಬೇಕಾಗಿತ್ತು. ಆದರೆ ಈ ಹಣ ಇಲ್ಲಿಯವರಗೆ ಬಿಡುಗಡೆಯಾಗಿಲ್ಲ. ಮಂತ್ರಾಲಯದ ವೆಬ್‌ಸೈಟ್ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಈಗಿನ ಈರುಳ್ಳಿ ಬೆಲೆ ಏರಿಕೆಯನ್ನು ಊಹಿಸಬಹುದಿತ್ತು. ತೋಟಗಾರಿಕಾ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಈರುಳ್ಳಿಯನ್ನು ಪ್ರಧಾನವಾಗಿ ಬೆಳೆಯುವ ರಾಜ್ಯಗಳಲ್ಲಿ (ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್ ಮತ್ತು ರಾಜಸ್ಥಾನ) ಈ ವರ್ಷ ಖಾರೀಫ್ ಇಳುವರಿ ಶೇ.7 ರಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜು ಮಾಡಿತ್ತು. ಸೆಪ್ಟಂಬರ್/ಅಕ್ಟೋಬರ್‌ನಲ್ಲಿ ಬಂದ ತೀವ್ರ ಮಳೆಯಿಂದಾಗ ಮಧ್ಯಪ್ರದೇಶದಲ್ಲಿ ಶೇ.58 ರಷ್ಟು, ಕರ್ನಾಟಕದಲ್ಲಿ ಶೇ. 18 ರಷ್ಟು, ಆಂಧ್ರದಲ್ಲಿ ಶೇ.2 ರಷ್ಟು ಬೆಳೆಗಳು ನಾಶವಾದವು. ನಿರಂತರ ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ ಈರುಳ್ಳಿ ಕುಯಿಲು ನಿಧಾನವಾಯಿತು. ಸರಕಾರ ನಿಧಾನವಾಗಿ ಎಚ್ಚರಗೊಂಡಿತು. ಎಂಎಂಟಿಸಿಗೆ ಒಂದು ಲಕ್ಷ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ದೇಶಿಸಿತು. ಅಫ್ಘಾನಿಸ್ತಾನ, ಟರ್ಕಿ, ಮತ್ತು ಈಜಿಪ್ಟ್‌ನಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಯಿತು. ಈರುಳ್ಳಿಯನ್ನು ಯಾವ ಬೆಲೆಯಲ್ಲಿ ಆಮದು ಮಾಡಿಕೊಂಡು ಭಾರತದ ಮಾರುಕಟ್ಟೆಯಲ್ಲಿ ಸುರಿಯಲಾಯಿತು ಎಂಬ ಪ್ರಶ್ನೆ ಹಾಗೆ ಉಳಿಯುತ್ತದೆ. ಇಂಡಿಯಾ ಜಗತ್ತಿನಲ್ಲೇ ಈರುಳ್ಳಿ ರಫ್ತು ಮಾಡುವ ದೊಡ್ಡ ದೇಶ. ಭಾರತ ಪ್ರತಿವರ್ಷ ಎರಡು ಮಿಲಿಯನ್ ಮೆಟ್ರಿಕ್ ಟನ್ ರಫ್ತು ಮಾಡುತ್ತದೆ. ರಫ್ತನ್ನು ನಿಷೇಧಿಸುವ ಬದಲು ಆಮದಿಗೆ ಅವಕಾಶವನ್ನು ಮುಕ್ತವಾಗಿ ಇಟ್ಟುಕೊಂಡರೆ, ದೇಶದಲ್ಲಿ ಈರುಳ್ಳಿ ಬೆಲೆ ಸಿಕ್ಕಾಪಟ್ಟೆ ಏರಿದ ಸಂದರ್ಭದಲ್ಲಿ, ಖಾಸಗಿ ವ್ಯಾಪಾರಿಗಳು ಬೇಕಾದಾಗ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಬಹುದು. ಸರಕಾರದ ನಿಧಾನದ ತೀರ್ಮಾನಕ್ಕೆ ಕಾಯಬೇಕಾಗಿಲ್ಲ. ಹೀಗೆ ಮಾಡುವುದರಿಂದ ಭಾರತ ರಫ್ತುದಾರನಾಗಿ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಿಂದ ರೈತರಿಗೆ ನಿರಂತರವಾಗಿ ಒಳ್ಳೆಯ ಬೆಲೆ ಸಿಗುತ್ತದೆ. ದಿಢೀರನೆ ರಫ್ತನ್ನು ನಿಷೇಧಿಸುವುದು ರೈತ ವಿರೋಧಿ ಮಾತ್ರವಲ್ಲ ಅದು ನಿಜವಾಗಿ ಸರಕಾರದ ನೀತಿಯ ವೈಫಲ್ಯವನ್ನು ತೋರಿಸುತ್ತದೆ. ಗ್ರಾಹಕರ ಆಸಕ್ತಿಯನ್ನು ಈಡೇರಿಸುವ ದೃಷ್ಟಿಯಿಂದ ಭಾರತ ಆಪರೇಷನ್ ಗ್ರೀನ್ ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು.

ರೈತರ ಹಾಗೂ ಗ್ರಾಹಕರ ಆಸಕ್ತಿಯನ್ನು ಕಾಪಾಡುವುದಕ್ಕೆ ಏನು ಮಾಡಬೇಕು?

ಮೊದಲಿಗೆ ರಾಬಿ ಈರುಳ್ಳಿಯನ್ನು ಸಂಗ್ರಹಿಸಿಡುವುದಕ್ಕೆ ಬೃಹತ್ ಪ್ರಮಾಣದಲ್ಲಿ ಸೌಲಭ್ಯ ಕಲ್ಪಿಸಬೇಕು. ರೈತರು ಮತ್ತು ವ್ಯಾಪಾರಿಗಳ ಮಟ್ಟದಲ್ಲಿ ಇದು ನಡೆಯಬೇಕು. ಎಪ್ರಿಲ್-ಮೇ ತಿಂಗಳಿನಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 4-5 ರೂಪಾಯಿ ಇದ್ದಾಗ ಈರುಳ್ಳಿಯನ್ನು ಉದಾಹರಣೆಗೆ ಕೆ.ಜಿ.ಗೆ 10ರೂಪಾಯಿನಂತೆ ಕೊಂಡುಕೊಳ್ಳಬೇಕು. ಆಧುನಿಕ ಖಾಸಗಿ ಕ್ಷೇತ್ರದ ಗೋದಾಮುಗಳಲ್ಲಿ ಶೇಖರಿಸಿಡಬೇಕು. ಪದೇ ಪದೇ ಸಂಗ್ರಹಣೆಯ ಮಿತಿಯನ್ನು ಹೇರುವುದು ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸುವುದು ಇವೆಲ್ಲಾ ಆಧುನಿಕ ಶೀತಸಂಗ್ರಹದಲ್ಲಿ ಖಾಸಗಿಯವರಿಗೆ ಹಣ ಹೂಡುವ ಉತ್ಸಾಹವನ್ನು ಕುಂದಿಸುತ್ತದೆ. ಖಾಸಗಿ ಸಂಗ್ರಹವನ್ನು ಉತ್ತೇಜಿಸಬೇಕು. ಅದಕ್ಕಾಗಿ ಅವಶ್ಯಕ ಸರಕು ಕಾಯ್ದೆ ಹೋಗಬೇಕು. ವ್ಯಾಪಾರಿಗಳು ಒಂದಾಗಿ ಬೆಲೆನಿಯಂತ್ರಿಸುವುದನ್ನು ತಪ್ಪಿಸುವುದಕ್ಕೆ ಭಾರತೀಯ ಸ್ಪರ್ಧಾ ಸಮಿತಿ (ಕಾಂಪಿಟೇಷನ್ ಕಮೀಷನ್ ಆಪ್ ಇಂಡಿಯಾ) ಕಾರ್ಯೋನ್ಮುಖವಾಗಬೇಕು. ಆದಾಯ ತೆರಿಗೆ ಸಿಬ್ಬಂದಿಗಳು ಇದರಲ್ಲಿ ಕೈಹಾಕಬಾರದು.

ಎರಡನೆಯದಾಗಿ ಸರಕಾರ ಒಣಗಿಸಿದ ಈರುಳ್ಳಿ (ಪುಡಿ, ಚೂರು ಇತ್ಯಾದಿ ರೂಪದಲ್ಲಿ) ಬಳಸುವುದಕ್ಕೆ ನಗರಗಳಲ್ಲಿ ಹಾಗೂ ದೊಡ್ಡ ಪ್ರಮಾಣದ ಬಳಕೆದಾರರನ್ನು (ಮಿಲಿಟರಿ, ಆಸ್ಪತ್ರೆ, ಹೊಟೇಲ್ ಇತ್ಯಾದಿಗಳಲ್ಲಿ) ಉತ್ತೇಜಿಸಬೇಕು. ಈರುಳ್ಳಿ ಸೂಕ್ಷ್ಮ ಸರಕಾದ್ದರಿಂದ ಸರಕಾರ ಕೂಡ ಒಣಗಿದ ಈರುಳ್ಳಿಯನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಅದನ್ನು ಹೆಚ್ಚು ಕಾಲ ಇಟ್ಟುಕೊಳ್ಳಬಹುದು. ಗುಜರಾತ್‌ನ ಮಹುವಾ ಈಗಾಗಲೇ ಒಣಗಿಸಿದ ಈರುಳ್ಳಿಯ ದೊಡ್ಡ ಕೇಂದ್ರವಾಗಿದೆ. ನೂರಕ್ಕಿಂತ ಹೆಚ್ಚು ಘಟಕಗಳು ಅಲ್ಲಿ ಕೆಲಸಮಾಡುತ್ತಿವೆ. ಆದರೆ ಅದಕ್ಕೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯ ಕೊರತೆಯಿದೆ. ಸ್ಥಳೀಯವಾಗಿಯೂ ಬೇಡಿಕೆ ಇಲ್ಲ. ಹಾಗಾಗಿ ಕಳೆದ ವರ್ಷದ ಸಂಗ್ರಹವೇ ಇನ್ನೂ ಮಾರಾಟವಾಗದೇ ಹಾಗೇ ಉಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಜೈನ್ ಇರಿಗೇಷನ್ ಇಂದು ಭಾರತದಲ್ಲಿ ಅತಿದೊಡ್ಡ ಈರುಳ್ಳಿ ಒಣಗಿಸುವ ಕಂಪೆನಿಯಾಗಿದೆ. ರೈತರಿಗೆ ಕೊಡುವ ಬೆಲೆ ಬೀಜ ಹಾಕುವುದಕ್ಕಿಂತ ಮೊದಲೇ ನಿರ್ಧರಿತವಾಗಿರುತ್ತದೆ. ನಿರ್ಧಾರಿತ ಬೆಲೆಗಿಂತ ಮಾರುಕಟ್ಟೆಯ ಬೆಲೆ ಜಾಸ್ತಿಯಾದರೆ ರೈತರಿಗೆ ಮಾರುಕಟ್ಟೆ ಬೆಲೆಗಿಂತ 60 ಪೈಸೆ ಕಡಿಮೆಮಾಡಿಕೊಂಡು ಹಣ ಕೊಡಲಾಗುತ್ತದೆ. ಅಂತಹ ಒಪ್ಪಂದದ ಕೃಷಿ ಮಾದರಿ ಮಾರುಕಟ್ಟೆಯ ರಿಸ್ಕನ್ನು ಕಮ್ಮಿ ಮಾಡುತ್ತದೆ. ಇದನ್ನು ಹೆಚ್ಚು ವಿಸ್ತರಿಸಬೇಕಾದ ಅವಶ್ಯಕತೆಯಿದೆ.

ಮೂರನೆಯದಾಗಿ, ರೈತ-ಉತ್ಪಾದಕರ ಸಂಘಟನೆಯಲ್ಲಿ ಸಣ್ಣ ರೈತರನ್ನು ಸಂಘಟಿಸಬೇಕು ಮತ್ತು ಸಂಘಟಿತ ಚಿಲ್ಲರೆ ವ್ಯಾಪಾರಿಗಳು ಒಪ್ಪಂದದ ಬೇಸಾಯದ ಮೂಲಕ ನೇರವಾಗಿ ಕೊಳ್ಳಲು ಪ್ರೋಮಂಡಿ ವ್ಯವಸ್ಥೆಯನ್ನು ಮೀರಿಕೊಳ್ಳುವುದಕ್ಕೆ ಸಾಧ್ಯವಾಗಬೇಕು. ಜೊತೆಗೆ ಈಗಿರುವ ಎಪಿಎಂಸಿ ಮಂಡಿಗಳ ಮೂಲಸೌಕರ್ಯವನ್ನು ಸಂಪೂರ್ಣ ಸುಧಾರಿಸಬೇಕು. ಇದರೊಂದಿಗೆ ಮಾರುಕಟ್ಟೆ ಸುಧಾರಣೆಯನ್ನು ತರಬೇಕು. ಮೋದಿ ಸರಕಾರ ತನ್ನ ಆಳ್ವಿಕೆಯಲ್ಲಿರುವ ಹಲವಾರು ರಾಜ್ಯಗಳಲ್ಲಿ ಎಪಿಎಂಸಿ ಸುಧಾರಣೆಯನ್ನು ಮಾಡುವುದಕ್ಕೆ ಇದ್ದ ಸೊಗಸಾದ ಅವಕಾಶವನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲ ಅಂತಹ ಅವಕಾಶಗಳು ದಿನದಿಂದ ದಿನಕ್ಕೆ ಕೈತಪ್ಪಿಹೋಗುತ್ತಿದೆ. ಅದು ಸಾಧ್ಯವಾಗದೆ ಎಲ್ಲವನ್ನೂ ಸೇರಿಸಿಕೊಂಡು ರಾಷ್ಟ್ರೀಯ ಮಾರುಕಟ್ಟೆಗಳನ್ನು ಸ್ಥಾಪಿಸುವ, ಬೆಲೆಗಳನ್ನು ಸ್ಥಿರಗೊಳಿಸುವುದಾಗಲಿ ಅಥವಾ ರೈತರಿಗೆ ಮತ್ತು ಗ್ರಾಹಕರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವ ಸಾಧ್ಯತೆ ಕಡಿಮೆ. ಇನ್ನಾದರೂ ಈರುಳ್ಳಿ ದುಸ್ವಪ್ನದಿಂದ ಎಚ್ಚರಗೊಂಡು ಬಾಳಿಕೆಯ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಒಳ್ಳೆಯದು. ಯೋಚನೆ ಮಾಡದೆ ತಕ್ಷಣಕ್ಕೆ ತೆಗೆದುಕೊಳ್ಳುವ ಕ್ರಮಗಳಿಂದ ಏನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ.

Writer - ಅಶೋಕ್ ಗುಲಾತಿ, ಹರ್ಷ ವರ್ಧನ

contributor

Editor - ಅಶೋಕ್ ಗುಲಾತಿ, ಹರ್ಷ ವರ್ಧನ

contributor

Similar News